ಯುವಕರಿಗೆ ನೈಪುಣ್ಯ ಶಿಬಿರಗಳ ಅಗತ್ಯವಿದೆ: ಪ್ರಭಾಕರ ಭಟ್

ಯುವಕರಿಗೆ ನೈಪುಣ್ಯ ಶಿಬಿರಗಳ ಅಗತ್ಯವಿದೆ: ಪ್ರಭಾಕರ ಭಟ್

DA   ¦    Sep 14, 2020 06:02:26 PM (IST)
ಯುವಕರಿಗೆ ನೈಪುಣ್ಯ ಶಿಬಿರಗಳ ಅಗತ್ಯವಿದೆ: ಪ್ರಭಾಕರ ಭಟ್

ಬೆಳ್ತಂಗಡಿ: ಸ್ವದೇಶಿ ಚಿಂತನೆ ಜಾಗೃತಗೊಳ್ಳಬೇಕಾದರೆ ಯುವಕರಿಗೆ ಹೆಚ್ಚು ಹೆಚ್ಚು ಆಸಕ್ತಿದಾಯಕ ಮೌಲ್ಯಗಳನ್ನು ಹುಟ್ಟುಹಾಕುವ ನೈಪುಣ್ಯ ಶಿಬಿರಗಳ ಅವಶ್ಯಕತೆ ಇದೆ. ಇದರಿಂದ ದೇಶದ ಆರ್ಥಿಕತೆ ಹೆಚ್ಚಾಗಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಭಟ್ ಹೇಳಿದರು.

ಗ್ರಾಮವಿಕಾಸ ಸಮಿತಿ ಮಂಗಳೂರು, ಸಹಕಾರ ಭಾರತಿ ದ.ಕ. ಜಿಲ್ಲೆ, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಆಶ್ರಯದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಸಹಕಾರದಲ್ಲಿ ಉಜಿರೆ ಶಾರದಾ ಮಂಟಪದಲ್ಲಿ ನಡೆಯಲಿರುವ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸ್ವದೇಶಿ ಕಲ್ಪನೆಯ ಜತೆಗೆ ಮಾರುಕಟ್ಟೆ ವಿಸ್ತರಣೆಯ ಕೌಶಲ್ಯವನ್ನು ಬೆಳೆಸಿಕೊಂಡಲ್ಲಿ ಸ್ಥಳೀಯ ವಸ್ತುಗಳು ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ನೈಪುಣ್ಯ ತರಬೇತಿ‌ ನೀಡಿದಲ್ಲಿ ಗ್ರಾಮಗಳು ಸಶಕ್ತೀಕರಣಗೊಳ್ಳಲಿವೆ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಸಾವಿರಾರು ವರ್ಷದ ಆಧ್ಯಾತ್ಮ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ದೇಶ ಭಾರತ. ಆದ್ದರಿಂದ ವಿದೇಶಿ ಚಿಂತನೆಯಿಂದ ಹೊರಬಂದು ಸ್ವದೇಶಿ ಚಿಂತನೆಯ ಭಾರತವನ್ನು ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಆತ್ಮನಿರ್ಭರ ಯೋಜನೆಯಡಿ ಆತ್ಮಶಕ್ತಿಯನ್ನು ಕಟ್ಟಿಕೊಡುವ ತರಬೇತಿ ಶಿಬಿರವಾಗಲಿ ಎಂದು ಹಾರೈಸಿದರು.

ಉಜಿರೆ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಸಮೂಹ ನಮ್ಮ ದೇಶದ ಅತೀದೊಡ್ಡ ಸಂಪನ್ಮೂಲ. ಅವರಿಗೆ ಶಿಕ್ಷಣ, ನೈಪುಣ್ಯ ತರಬೇತಿ ನೀಡಿ ದೇಶ ಕಟ್ಟುವ ಸಾಮರ್ಥ್ಯ ಬೆಳೆಸಬೇಕಿದೆ. ಕೊರೊನಾ ಸಂಕಷ್ಟದಲ್ಲಿ ಅನೇಕ ಉದ್ದಿಮೆಗಳು ಕುಸಿತ ಕಾಣುತ್ತಿರುವ ನಡುವೆ ಉದ್ಯೋಗ ನೈಪುಣ್ಯ ತರಬೇತಿ ಉತ್ತಮ ಸಂಯೋಜನೆ ಎಂದು ಹೇಳಿದರು.

ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ, ವಿವೇಕಾನಂದ ಪಾಲಿಟೆಕ್ನಿಕ್ ಅಧ್ಯಕ್ಷ ಪ್ರಸನ್ನ ಭಟ್ ಶುಭಹಾರೈಸಿದರು.

ಗ್ರಾಮವಿಕಾಸ ವಿಭಾಗ ಸಂಯೋಜಕ ವೆಂಕಟ್ರಮಣ ಹೊಳ್ಳ, ನೈಪುಣ್ಯ ಶಿಬಿರ ಸಂಯೋಜಕ ಸುಭಾಶ್ ಕಳೆಂಜ, ಲಕ್ಣ್ಮಣ ದಾಸ್, ದಿನೇಶ ಬೊಳ್ಮಲೆ ಉಪಸ್ಥಿತರಿದ್ದರು.

ತಾಲೂಕು ಸಹಕಾರ ಭಾರತಿ ಅಧ್ಯಕ್ಷ ಸುಂದರ ಹೆಗ್ಡೆ ಸ್ವಾಗತಿಸಿದರು. ಮುಖ್ಯಪ್ರಬಂಧಕ ವಿನಯಚಂದ್ರ ವಂದಿಸಿದರು. ರಶ್ಮಿಪಲ್ಲವಿ ಧ್ಯೇಯಗೀತೆ ಹಾಡಿದರು, ಮಾನಸ ಸಹಕರಿಸಿದರು. ಪ್ರಧಾನ ಸಂಚಾಲಕ ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರೂಪಿಸಿದರು.