ಹಾಲು ಉತ್ಪಾದಕರ ಸಂಘದಲ್ಲಿ ಸಿಗದ ಸದಸ್ಯತ್ವ: ಹೈನುಗಾರಿಕಾ ಕೃಷಿಕೆ ಆರೋಪ

ಹಾಲು ಉತ್ಪಾದಕರ ಸಂಘದಲ್ಲಿ ಸಿಗದ ಸದಸ್ಯತ್ವ: ಹೈನುಗಾರಿಕಾ ಕೃಷಿಕೆ ಆರೋಪ

MV   ¦    Jun 12, 2019 05:34:49 PM (IST)
ಹಾಲು ಉತ್ಪಾದಕರ ಸಂಘದಲ್ಲಿ ಸಿಗದ ಸದಸ್ಯತ್ವ: ಹೈನುಗಾರಿಕಾ ಕೃಷಿಕೆ ಆರೋಪ

ಬಂಟ್ವಾಳ: ಕಳೆದ 18 ತಿಂಗಳಿನಿಂದ ಪ್ರತಿದಿನ 40 ಲೀ.ಹಾಲು ಕೊಡುತ್ತಿದ್ದರೂ ಬಂಟ್ವಾಳ ತಾಲೂಕಿನ ಸೋರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘ ಸದಸ್ಯತ್ವ ನೀಡಲು ನಿರಾಕರಿಸುತ್ತಿದ್ದು, ಪರಿಣಾಮವಾಗಿ ಸರಕಾರದ ಪ್ರೋತ್ಸಾಹಧನ ಸಹಿತ ವಿವಿಧ ಸವಲತ್ತಿನಿಂದ ವಂಚಿತಳಾಗಿದ್ದೆನೆ ಎಂದು ಸ್ಥಳೀಯ ಹೈನುಗಾರಿಕಾ ಕೃಷಿಕೆ ಲಿಲ್ಲಿ ಮೇರಿ ರೋಡ್ರಿಗಸ್ ಅವರು ಆಳಲು ತೋಡಿಕೊಂಡಿದ್ದಾರೆ.

ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸದಸ್ಯರಾಗಿ ನೋಂದಾಯಿಸಲು ಹಲವು ಬಾರಿ ಅರ್ಜಿ ಮೂಲಕ ಮನವಿ ಸಲ್ಲಿಸಿದರೂ ಸದಸ್ಯತ್ವ ನೀಡಲು ಸತಾಯಿಸುತ್ತಿದ್ದಾರೆ. ಈ ಬಗ್ಗೆ ಸಹಕಾರಿ ಸಂಘದ ಅಧಿಕಾರಿಗಳಿಗೂ ನಿರಂತರ ಅರ್ಜಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದರು.

ಸುಮಾರು 4.50 ಲಕ್ಷ ರೂ.ಮೌಲ್ಯದ ಹಾಲನ್ನು ಸೋರ್ನಾಡು ಹಾ.ಉ.ಸ.ಸಂಘಕ್ಕೆನೀಡುತ್ತಾ ಬಂದಿದ್ದೇನೆ. ಆದರೆ ತನ್ನನ್ನು ಉದ್ದೇಶಪೂರ್ವಕವಾಗಿ ಸದಸ್ಯಳನ್ನಾಗಿ ನೋಂದಾಯಿಸದೆ ಸಂಘದ ವಾರ್ಷಿಕ ಧನಸಹಾಯ ನೀಡದೆ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿಯವರು ಅನ್ಯಾಯವೆಸಗಿದ್ದಾರೆ ಎಂದು ದೂರಿಕೊಂಡರು. ಈ ವಿಚಾರದಲ್ಲಿ ಸಹಕಾರಿ ಸಂಘಗಳ ಅಧಿಕಾರಿ ವರ್ಗವು ನನಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದ ಅವರು ಇದರ ವಿರುದ್ದ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಲಿಲ್ಲಿ ಅವರ ಪತಿ ಡೋನಾಲ್ಡ್ ಪಿಂಟೋ ಅವರು ಮಾತನಾಡಿ, ಎರಡು ವರ್ಷದ ಹಿಂದೆ ಆಚಾರಿಪಲ್ಕೆ ಹಾ.ಉ.ಸ.ಸಂಘದಲ್ಲಿ ಸದಸ್ಯತ್ವ ಹೊಂದಿದ್ದು, ಬಳಿಕ ಸಂಘದ ಕಾರ್ಯಕಾರಿ ಮಂಡಳಿಯ ನಿರ್ದೇಶಕನಾಗಿದ್ದೆ. ಬಳಿಕ ತನ್ನ ಮನೆ ಮತ್ತು ಸಂಘದ ಕಾರ್ಯವ್ಯಾಪ್ತಿ ಸೋರ್ನಾಡು ಹಾಲು ಉತ್ಪಾದಕರ ಸಂಘದ ವ್ಯಾಪ್ತಿಗೆ ಒಳಪಟ್ಟ ಹಿನ್ನೆಲೆಯಲ್ಲಿ ಆಚಾರಿಪಲ್ಕೆ ಸಂಘದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಘದ ಸದಸ್ಯತ್ವವನ್ನು ರದ್ದುಪಡಿಸುವಂತೆ ಕೋರಿದ್ದೆ. ಅದರಂತೆ ಸದಸ್ಯತ್ವ ರದ್ದಾಗಿರುತ್ತದೆ ಎಂದರು. ಇದೇ ಕಾರಣ ಮುಂದಿಟ್ಟು ತನ್ನ ಪತ್ನಿಗೆ ಸದಸ್ಯತ್ವ ನೀಡಲು ಸೋರ್ನಾಡು ಸಂಘವು ನಿರಾಕರಿಸುತ್ತಿದೆ ಎಂದರು.

ಹೈನುಗಾರ ಅಲ್ಬನ್ ಪಿಂಟೋ ಸುದ್ದಿಗೋಷ್ಟಿಯಲ್ಲಿದ್ದರು.