ಮಹಿಳೆಯರು ಆರ್ಥಿಕ ಸ್ವಾವಲಂಬಿಯಾಗಲು ಸಿರಿ ಗ್ರಾಮೋದ್ಯೋಗ ಆರಂಭ: ವೀರೇಂದ್ರ ಹೆಗ್ಗಡೆ

ಮಹಿಳೆಯರು ಆರ್ಥಿಕ ಸ್ವಾವಲಂಬಿಯಾಗಲು ಸಿರಿ ಗ್ರಾಮೋದ್ಯೋಗ ಆರಂಭ: ವೀರೇಂದ್ರ ಹೆಗ್ಗಡೆ

GK   ¦    Mar 14, 2020 03:08:58 PM (IST)
ಮಹಿಳೆಯರು ಆರ್ಥಿಕ ಸ್ವಾವಲಂಬಿಯಾಗಲು ಸಿರಿ ಗ್ರಾಮೋದ್ಯೋಗ ಆರಂಭ: ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ : ಮಹಾತ್ಮ ಗಾಂಧೀಜಿಯವರ ಚಿಂತನೆಯಂತೆ ಸ್ವಉದ್ಯೋಗಕ್ಕೆ ಒತ್ತು ನೀಡಲು ಗುಡಿ ಕೈಗಾರಿಕೆ, ಗೃಹ ಕೈಗಾರಿಕೆ, ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಮಹಿಳೆಯರಿಗೆ ಉದ್ಯೋಗದ ಜೊತೆ ಆರ್ಥಿಕ ಸ್ವಾವಲಂಬಿಯಾಗಲು ಸಿರಿ ಗ್ರಾಮೋದ್ಯೋಗ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಇದು ಉತ್ಪನ್ನಗಳ ಗುಣಮಟ್ಟದಿಂದ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿಸಲು ಪ್ರಯತ್ನಿಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

ಅವರು ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕರ್ನಾಟಕ ಬ್ಯಾಂಕ್, ಸಿರಿ ಸಂಸ್ಥೆಗೆ ನೀಡಿದ ಸರಕು ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧರ್ಮಸ್ಥಳದಿಂದ ಮಹಿಳೆಯರ ಸಬಲೀಕರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರಲ್ಲಿ ಸಿರಿ ಗ್ರಾಮೋಧ್ಯೋಗ ಸಂಸ್ಥೆಯೂ ಒಂದು.

ಈಗಾಗಲೇ 295ಗ್ರಾಮಗಳಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಮಹಿಳೆಯರು ಎಂಬತ್ತಕ್ಕೂ ಅಧಿಕ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಮಹಿಳೆಯರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡಲು ಕಷ್ಟ ಎಂಬುದನ್ನು ಮನಗಂಡು ಸಿರಿ ಸಂಸ್ಥೆಯು ಕಚ್ಚಾ ವಸ್ತುಗಳನ್ನು ನೀಡಿ ಬಳಿಕ ಮಾರುಕಟ್ಟೆ ವ್ಯವಸ್ಥೆ ಮಾಡುತ್ತಿದೆ. ಉತ್ಪನ್ನಗಳ ಗುಣಮಟ್ಟ ಉತ್ತಮವಿರುವುದರಿಂದ ಬೇಡಿಕೆಯೂ ಹೆಚ್ಚಿದೆ. ಇದೀಗ ಮಹಿಳೆಯರಿಗೆ ಹಣಕಾಸಿನ ಚಿಂತೆ ಇಲ್ಲದೆ ಹೆಚ್ಚು ಉದ್ಯೋಗ ಸೃಷ್ಠಿ ಮಾಡಲು ಸಿರಿ ಸಂಸ್ಥೆ ಮುಂದಾಗಿದ್ದು ಇದರಿಂದ ಸಾವಿರಾರು ಕುಟುಂಬಗಳಿಗೆ ಉದ್ಯೋಗ ದೊರೆತು ಆರ್ಥಿಕವಾಗಿ ಸಶಕ್ತರಾಗಲು ಸಾಧ್ಯವಾಗುತ್ತದೆ ಎಂದರು.

ಕರ್ನಾಟಕ ಬ್ಯಾಂಕಿನ ಎಂ.ಡಿ ಮತ್ತು ಸಿ.ಇ.ಒ ಮಹಾಬಲೇಶ್ವರ ಎಂ.ಎಸ್. ಮಾತನಾಡಿ 96ವರ್ಷಗಳ ಇತಿಹಾಸವಿರುವ ಕರ್ನಾಟಕ ಬ್ಯಾಂಕ್ ಲಾಭದಾಯಕ ದೃಷ್ಠಿಯನ್ನು ಕಾಣದೆ ಜನರಿಗೆ ಉತ್ತಮ ಸೇವೆಯನ್ನು ನೀಡಲು ಮುಂದಾಗಿದೆ. ಗ್ರಾಮೀಣ ಭಾಗದ ಜನರ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕ್ ನಿರಂತರವಾಗಿ ಚಿಂತಿಸಿದ್ದು ಅದಕ್ಕಾಗಿ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಶಾಖೆಯನ್ನು ತೆರೆಯುತ್ತಿದೆ. ಈ ಚಿಂತನೆಯಿಂದಲೇ ಬ್ಯಾಂಕ್ 95ವರ್ಷಗಳಿಂದ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಸಿರಿ ಗ್ರಾಮೋದ್ಯೋಗ ಸಂಸ್ಥೆಯು ಕೂಡ ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಅದಕ್ಕಾಗಿ ಕರ್ನಾಟಕ ಬ್ಯಾಂಕ್ ಸಿರಿ ಉತ್ಪನ್ನಗಳನ್ನು ಸಾಗಾಟ ಮಾಡಲು ಅನುಕೂಲವಾಗುವಂತೆ ಸರಕು ವಾಹನವನ್ನು ಕೊಡುಗೆಯಾಗಿ ನೀಡುತ್ತಿದ್ದು ಇದರಿಂದ ಮಹಿಳೆಯರ ಆರ್ಥಿಕ ಅಭಿವೃದ್ಧಿ ಇನ್ನಷ್ಟು ಬೆಳೆಯಲಿ ಎಂದರು.

ವಾಹನವನ್ನು ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ಧನ್‍ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕಿನ ಮಾಜಿ ನಿರ್ದೇಶಕ ಡಿ.ಹರ್ಷೇಂದ್ರ ಕುಮಾರ್, ಬ್ಯಾಂಕಿನ ಜನರಲ್ ಮ್ಯಾನೇಜರ್ ಚಂದ್ರಶೇಖರ್ ರಾವ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಚಂದ್ರಶೇಖರ್, ಬ್ಯಾಂಕಿನ ಚೀಫ್ ಮ್ಯಾ ನೇಜರ್ ಮಲ್ಲಿಕಾ, ಉಜಿರೆ ಶಾಖೆಯ ಮ್ಯಾನೇಜರ್ ಅರವಿಂದ ಭಂಡರ್ಕಾರ್, ಟಾಟಾ ಕಂಪೆನಿಯ ಎ.ಜಿ.ಎಂ ಉದಯ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರನ್ನು ಮತ್ತು ಅಧಿಕಾರಿಗಳನ್ನು ಡಾ. ಹೆಗ್ಗಡೆ ಅಭಿನಂದಿಸಿದರು. ಬ್ಯಾಂಕಿನ ವತಿಯಿಂದ ಡಾ. ಹೆಗ್ಗಡೆಯವರನ್ನು ಮಹಾಬಲೇಶ್ವರ ಎಂ.ಎಸ್ ಅಭಿನಂದಿಸಿದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ದನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿರಿ ಯೋಜನಾಧಿಕಾರಿ ರೋಹಿತಾಕ್ಷ ಸ್ವಾಗತಿಸಿ ಜೀವನ್ ವಂದಿಸಿದರು.