ಕಸ್ತೂರಿರಂಗನ್ ವರದಿ ನಿರ್ಧಾರಕ್ಕೆ ಸಂಪುಟ ಉಪಸಮಿತಿ: ಅಂಗಾರ

ಕಸ್ತೂರಿರಂಗನ್ ವರದಿ ನಿರ್ಧಾರಕ್ಕೆ ಸಂಪುಟ ಉಪಸಮಿತಿ: ಅಂಗಾರ

GK   ¦    Nov 21, 2020 07:35:00 PM (IST)
ಕಸ್ತೂರಿರಂಗನ್ ವರದಿ ನಿರ್ಧಾರಕ್ಕೆ ಸಂಪುಟ ಉಪಸಮಿತಿ: ಅಂಗಾರ

ಸುಳ್ಯ: ಕಸ್ತೂರಿ ರಂಗನ್ ವರದಿಯ ವಿರುದ್ಧವಾಗಿ ಸುಳ್ಯ ಕ್ಷೇತ್ರದ ವಿವಿಧ ಕಡೆಗಳಲ್ಲಿ ಸಭೆಗಳು, ಪ್ರತಿಭಟನೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಕಸ್ತೂರಿ ರಂಗನ್ ವರದಿ ಬಗ್ಗೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಸಂಪುಟ ಉಪಸಮಿತಿಯನ್ನು ರಚಿಸಿದೆ. ಜನರಿಗೆ ತೊಂದರೆ ಆಗದಂತೆ ಸಮಿತಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಜನರು ಆತಂಕಪಡುವ ಅಗತ್ಯ ಇಲ್ಲ ಎಂದು ಶಾಸಕ ಎಸ್.ಅಂಗಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ರಾಜ್ಯದ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಕಸ್ತೂರಿರಂಗನ್ ವರದಿ ಕುರಿತು ಸೂಕ್ತ ನಿರ್ಧಾರವನ್ನು ಕೈಗೊಳ್ಳಲು ಅರಣ್ಯ ಸಚಿವ ಆನಂದ್ ಸಿಂಗ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಗಣಿ ಮತ್ತುಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್, ಕಾರ್ಮಿಕ ಸಚಿವ ಅರೆಬೈಲ್ ಹೆಬ್ಬಾರ್ ಶಿವರಾಮ್ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ಭಾಗದ ಜನರ ಸಮಸ್ಯೆಗಳ ಬಗ್ಗೆ ಮತ್ತು ಜನರ ಅತಂಕದ ಬಗ್ಗೆ ಸಮಿತಿಯ ಗಮನಕ್ಕೆ ತರಲಾಗುವುದು. ಹಿಂದಿನ ಕಾಂಗ್ರೆಸ್ ಸರ್ಕಾರ ಕಸ್ತೂರಿ ರಂಗನ್ ವರದಿ ಬಗ್ಗೆ ಸಮರ್ಪಕವಾದ ನಿರ್ಧಾರ ಕೈಗೊಂಡಿಲ್ಲ. ಮತ್ತು ಸರಿಯಾದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿಲ್ಲ. ಈ ಕಾರಣದಿಂದ ಜನರ ಆತಂಕ ದೂರವಾಗಿಲ್ಲ. ಬಿಜೆಪಿ ಸರ್ಕಾರ ಕಸ್ತೂರಿ ರಂಗನ್ ವರದಿಯ ಸಾಧಕ, ಬಾಧಕಗಳ ಬಗ್ಗೆ ಮತ್ತು ಲೋಪ ದೋಷಗಳ ಬಗ್ಗೆ ಚರ್ಚೆ ನಡೆಸಿ ಜನರಿಗೆ ಸಮಸ್ಯೆ ಆಗದ ರೀತಿಯಲ್ಲಿ ಸಮರ್ಪಕವಾದ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸಲಿದೆ ಎಂದು ಅವರು ಹೇಳಿದರು.