ಅಡಕೆ ಹಳದಿ ರೋಗ ಪೀಡಿತ ಪ್ರದೇಶಗಳ ಸಮೀಕ್ಷೆ ಮುಕ್ತಾಯ

ಅಡಕೆ ಹಳದಿ ರೋಗ ಪೀಡಿತ ಪ್ರದೇಶಗಳ ಸಮೀಕ್ಷೆ ಮುಕ್ತಾಯ

GK   ¦    Jun 12, 2020 06:35:17 PM (IST)
ಅಡಕೆ ಹಳದಿ ರೋಗ ಪೀಡಿತ ಪ್ರದೇಶಗಳ ಸಮೀಕ್ಷೆ ಮುಕ್ತಾಯ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಕೆ ಹಳದಿ ಎಲೆ ರೋಗ ಬಾಧಿತ ಪ್ರದೇಶಗಳ ವ್ಯಾಪ್ತಿ ಹಾಗು ತೀವ್ರತೆಯ ಅಂಕಿ ಅಂಶಗಳನ್ನು ನಿಖರವಾಗಿ ತಿಳಿಯಲು ನಡೆಸಿದ ಸಮೀಕ್ಷೆ ಬಹುತೇಕ ಪೂರ್ತಿಗೊಂಡಿದೆ.

ಸುಳ್ಯ ತಾಲೂಕಿನ 13 ಗ್ರಾಮಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಒಟ್ಟು 1,167 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಕೃಷಿ ನಾಶವಾಗಿದೆ ಎಂದು ಪತ್ತೆ ಹಚ್ಚಲಾಗಿದೆ. 14,241 ಸರ್ವೆ ನಂಬರ್‍ ಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ 16 ಲಕ್ಷ ಅಡಕೆ ಮರಗಳು ಹಳದಿ ರೋಗಕ್ಕೆ ತುತ್ತಾಗಿ ನಾಶವಾಗಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಸಂಪಾಜೆ ಗ್ರಾಮದ 1ರಿಂದ 98ರವರೆಗಿನ ಸರ್ವೆನಂಬರ್‍ ನ ಸಮೀಕ್ಷಾ ವರದಿ ಮಾತ್ರ ಬರಲು ಬಾಕಿ ಉಳಿದಿದ್ದು. ಅದು ಲಭ್ಯವಾದ ಕೂಡಲೇ ಅಡಕೆ ಕೃಷಿ ನಾಶದ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.

ಅಡಕೆ ಹಳದಿ ರೋಗದಿಂದ ತತ್ತರಿಸಿದ ರೈತರಿಗೆ ಪರಿಹಾರ ದೊರಕಿಸಬೇಕು ಎಂಬ ನಿಟ್ಟಿನಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ ಅರಂತೋಡಿನಲ್ಲಿ ಶಾಸಕ ಎಸ್.ಅಂಗಾರ ಉಪಸ್ಥಿತಿಯಲ್ಲಿ ದ.ಕ.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಸೆಲ್ವಮಣಿ ನೇತೃತ್ವದಲ್ಲಿ ಹಳದಿ ಎಲೆ ರೋಗ ಬಾದಿತ ಪ್ರದೇಶಗಳ ರೈತರ ಸಭೆ ನಡೆದಿತ್ತು. ರೈತರಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಹಳದಿ ರೋಗ ಪೀಡಿತ ಪ್ರದೇಶಗಳ ಸಮಗ್ರ ಸಮೀಕ್ಷೆ ನಡೆಸಲು ಈ  ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಸಮೀಕ್ಷೆ ನಡೆಸಿ ಜಿಲ್ಲೆಯಲ್ಲಿ ಅಡಕೆ ಹಳದಿ ಎಲೆ ರೋಗ ಬಾಧಿತ ಪ್ರದೇಶಗಳ ವ್ಯಾಪ್ತಿ ಮತ್ತು ತೀವ್ರತೆಯ ಬಗ್ಗೆ ನಿಖರ ಅಂಕಿ ಅಂಶಗಳನ್ನು ಪಡೆದು ರೈತರಿಗೆ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿತ್ತು. ಈ ನಿಟ್ಟಿನಲ್ಲಿ ಕಂದಾಯ, ಪಂಚಾಯತ್ ರಾಜ್ ಮತ್ತು ತೋಟಗಾರಿಕಾ ಇಲಾಖಾ ಅಧಿಕಾರಿಗಳನ್ನೊಳಗೊಂಡ ಸಮೀಕ್ಷಾ ತಂಡವನ್ನು ರಚಿಸಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ನಡೆಸುವ ಅಧಿಕಾರಿಗಳಿಗೆ ತಜ್ಞರಿಂದ ತಾಂತ್ರಿಕ ಅಂಶಗಳ ಬಗ್ಗೆ ತರಬೇತಿಯನ್ನು ನೀಡಿ ಡಿಸೆಂಬರ್ ತಿಂಗಳ ಕೊನೆಯಲ್ಲಿ ಸಮೀಕ್ಷೆ ಆರಂಭಿಸಲಾಗಿತ್ತು. 15 ದಿನದಲ್ಲಿ ಸಮೀಕ್ಷೆ ಮುಕ್ತಾಯಗೊಳಿಸಿ ವರದಿಯನ್ನು ಸಲ್ಲಿಸಬೇಕು ಎಂದು ಆದೇಶ ನೀಡಲಾಗಿತ್ತು. ಆದರೆ ಲಾಕ್ ಡೌನ್ ಮತ್ತಿತರ ಕಾರಣಗಳಿಂದ ಸಮೀಕ್ಷೆ ಆರು ತಿಂಗಳು ತಡವಾಗಿದೆ.

 

ಯಾವ ಗ್ರಾಮದಲ್ಲಿ ಸಮೀಕ್ಷೆ

ಅಡಕೆ ಹಳದಿ ಎಲೆ ರೋಗಕ್ಕೆ ತುತ್ತಾದ ಸುಳ್ಯ ತಾಲೂಕಿನ 13 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಸಂಪಾಜೆ, ಅರಂತೋಡು, ತೊಡಿಕಾನ, ಆಲೆಟ್ಟಿ, ಕೊಡಿಯಾಲ, ಉಬರಡ್ಕ ಮಿತ್ತೂರು, ಮರ್ಕಂಜ, ಮಡಪ್ಪಾಡಿ, ಕೊಲ್ಲಮೊಗ್ರ, ಕಲ್ಮಕ್ಕಾರು, ನೆಲ್ಲೂರು ಕೆಮ್ರಾಜೆ, ಹರಿಹರ ಪಳ್ಳತ್ತಡ್ಕ ಮತ್ತು ಅಮರಮುಡ್ನೂರು ಗ್ರಾಮದಲ್ಲಿ 14,241 ಸರ್ವೆ ನಂಬರ್ ಗಳ ಪ್ರದೇಶದ ಅಡಕೆ ತೋಟಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

 

``ಅಡಕೆ ಹಳದಿ ಎಲೆ ಬಾದಿತ ಪ್ರದೇಶಗಳ ವ್ಯಾಪ್ತಿ ಮತ್ತು ತೀವ್ರತೆಯ ಬಗ್ಗೆ ನಿಖರ ಅಂಕಿ ಅಂಶಗಳನ್ನು ಪಡೆದು ರೈತರ  ಸಮಸ್ಯೆ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ನಿಟ್ಟಿನಲ್ಲಿ ಅಡಕೆ ಹಳದಿ ರೋಗ ಇರುವ ಪ್ರದೇಶಗಳ ವಿಸ್ತೃತ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಸಮೀಕ್ಷೆ ಬಹುತೇಕ ಪೂರ್ತಿಗೊಂಡಿದ್ದು ಸಂಪಾಜೆ ಗ್ರಾಮದ 1ರಿಂದ 98 ಸರ್ವೆ ನಂಬರ್‍ವರೆಗಿನ ಸಮೀಕ್ಷಾ ವರದಿ ಬರಲು ಬಾಕಿ ಇದೆ. ಅದು ಬಂದ ಬಳಿಕ ಅಂತಿಮ ವರದಿ ಸಲ್ಲಿಸಲಾಗುವುದು.

ಸುಹಾನ, ಸಹಾಯಕ ನಿರ್ದೇಶಕಿ.

ತೋಟಗಾರಿಕಾ ಇಲಾಖೆ, ಸುಳ್ಯ.