`ಸೌಲಭ್ಯ ನೀಡಿ, ಇಲ್ಲವಾದಲ್ಲಿ ದಯಾಮರಣ ನೀಡಿ’

`ಸೌಲಭ್ಯ ನೀಡಿ, ಇಲ್ಲವಾದಲ್ಲಿ ದಯಾಮರಣ ನೀಡಿ’

DA   ¦    Oct 17, 2020 07:00:27 PM (IST)
`ಸೌಲಭ್ಯ ನೀಡಿ, ಇಲ್ಲವಾದಲ್ಲಿ ದಯಾಮರಣ ನೀಡಿ’

ಬೆಳ್ತಂಗಡಿ: ಇಲ್ಲಿನ ಮಿನಿ ವಿಧಾನಸೌಧದಲ್ಲಿ ತಹಶಿಲ್ದಾರ್ ಮಹೇಶ್ ಜಿ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಪ.ಜಾತಿ, ಪ.ಪಂಗಡದವರ ಹಿತರಕ್ಷಣಾ ಸಭೆ ನಡೆಯಿತು.

ತಾಲೂಕಿನಲ್ಲಿ ಅದೆಷ್ಟೋ ಕುಟುಂಬಗಳು ಮನೆ ಇಲ್ಲದೆ, ನಿವೇಶನ ಇಲ್ಲದೆ ಗುಡಿಸಲಿನಲ್ಲಿ ವಾಸವಾಗಿದ್ದು ಈ ಬಗ್ಗೆ ಅಧಿಕಾರಿಗಳಲ್ಲಿ ಮನವಿ ಮಾಡಿದರೆ ನಿವೇಶನವಾಗಲಿ, ಮನೆಯಾಗಲಿ ಮಂಜೂರಾಗುವುದಿಲ್ಲ. ಬ್ರಿಟೀಷರ ಕಾಲಕ್ಕಿಂತಲೂ ಈಗ ದಲಿತರು ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದಾರೆ. ನಮಗೆ ಸಿಗುವ ಸೌಲಭ್ಯವನ್ನು ನೀಡಿ ಇಲ್ಲವಾದಲ್ಲಿ ದಯಾಮರಣ ನೀಡಿ ನಾವು ಸಾಯಲು ಸಿದ್ಧ ಎಂದು ದಲಿತ ಮುಖಂಡ ನೇಮಿರಾಜ ಕಿಲ್ಲೂರು ಹೇಳಿದರು.

ಮಳೆಹಾನಿ ಪ್ರದೇಶದಲ್ಲಿಯೂ ದಲಿತರನ್ನು ಕಡೆಗಣಿಸಲಾಗಿದೆ. ದಲಿತರ ಕೃಷಿ ಹಾನಿಯಾದರೂ ಪರಿಹಾರ ಸಿಕ್ಕಿಲ್ಲ, ದಲಿತರು ಮನೆ ಕಳೆದುಕೊಂಡದ್ದನ್ನು ದಾಖಲೆ ಸಹಿತ ನೀಡಿ ಇದೇ ರೀತಿ ಅನೇಕ ಕುಟುಂಬಗಳಿವೆ ಎಂದು ಆರೋಪಿಸಿದರು. ಇದಕ್ಕೆ ತಹಶಿಲ್ದಾರ್ ಈಗಾಗಲೇ ಮಳೆಹಾನಿಗೀಡಾದ ಪ್ರದೇಶದ ಹಾನಿಗಿಡಾದ ಮನೆಗಳನ್ನು ಗುರುತಿಸಲಾಗಿದೆ. ಇನ್ನೂ ಹಾನಿಗೊಳಗಾದ ಕುಟುಂಬಗಳಿದ್ದರೆ ತಕ್ಷಣ ಮಾಹಿತಿ ನೀಡಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಮಾಹಿತಿ ನೀಡಿದರು.

ತಾಲೂಕಿನಲ್ಲಿ ಪ್ರತೀ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಮನವಿ ಮಾಡಿದ್ದು ಇದಕ್ಕೆ ನಿವೇಶನ ನೀಡುವಂತೆ ಹಲವಾರು ಬಾರಿ ಒತ್ತಾಯಿಸಿದ್ದೇವೆ ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ದಲಿತ ಮುಖಂಡರುಗಳಾದ ಶೇಕರ್ ಕುಕ್ಕೇಡಿ, ಸಂಜೀವ ಆರ್ ಹಾಗೂ ಇನ್ನಿತರ ಮುಖಂಡರು ಒತ್ತಾಯಿಸಿದರು ಇದಕ್ಕೆ ತಹಶಿಲ್ದಾರ್ ಉತ್ತರಿಸಿ ಈಗಾಗಲೇ 15ಕಡೆ ಅಂಬೆಡ್ಕರ್ ಭವನ ನಿರ್ಮಿಸಲು ಜಾಗ ಗುರುತಿಸಿದ್ದು ಇದರ ಮಂಜೂರಾತಿ ಹಂತಕ್ಕೆ ಸರಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಇನ್ನು ನಾಲ್ಕು ಕಡೆ ಜಾಗ ಗುರುತಿಸಲು ಬಾಕಿ ಇದೆ ಎಂದು ಉತ್ತರಿಸಿದರು.

ಕೆಲವು ಕಡೆ ಒಂದು ದಲಿತ ಕುಟುಂಬ ಮನೆ ಇದ್ದರೂ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದೆ ಹಲವಾರು ಕುಟುಂಬಗಳಿದ್ದ ಕಡೆ ರಸ್ತೆ ಸೌಕರ್ಯವಿಲ್ಲದೆ ಕುಟುಂಬಗಳು ಪರದಾಡುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ರಾಘವ ಕಲ್ಮಂಜ ಒತ್ತಾಯಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಸೂರ್ಯನಾರಾಯಣ ಭಟ್ ತಿಳಿಸಿದರು.

ಕುಕ್ಕೇಡಿ ಅಂಬೆಡ್ಕರ್ ಭವನದ ಬಳಿ ಸಾರ್ವಜನಿಕ ನೀರಿನ ಟ್ಯಾಂಕ್ ನಿರ್ಮಿಸಲು ಅನುದಾನ ಮಂಜೂರಾಗಿದ್ದು ತಹಸೀಲ್ದಾರ್ ಸ್ಥಳವನ್ನು ಗುರುತಿಸಿದ್ದಾರೆ. ಆದರೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಕಾಮಗಾರಿ ಪ್ರಾರಂಭಿಸದೆ ನಮ್ಮ ಮನವಿಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಶೇಖರ್ ಕುಕ್ಕೇಡಿ ಆರೋಪಿಸಿದರು. ಇದಕ್ಕೆ ಇಂಜಿನಿಯರ್ ಉತ್ತರಿಸಿ ಇಲ್ಲಿ ಕಾಮಗಾರಿ ಪ್ರಾರಂಭಿಸಲು ಸ್ಥಳೀಯರು ಅಡ್ಡಿಪಡಿಸುತ್ತಿದ್ದಾರೆ ಎಂದು ಉತ್ತರಿಸಿದಾಗ ಆಕ್ರೋಶಗೊಂಡ ದಲಿತ ಮುಖಂಡರು, ಸರಕಾರಿ ಭೂಮಿಯಲ್ಲಿ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದರೆ ಇಲಾಖೆ ಏನು ಮಾಡುತ್ತಿದೆ, ಹಾಗಾದರೆ ಕಾಮಗಾರಿ ನಡೆಸುವವರು ಯಾರು ಎಂದು ಪ್ರಶ್ನಿಸಿದರು. ಇದಕ್ಕೆ ತಹಸೀಲ್ದಾರ್ ಮಧ್ಯಪ್ರವೇಶಿಸಿ ತಕ್ಷಣ ಕಾಮಗಾರಿ ಪ್ರಾರಂಭಿಸಬೇಕು ಕಾಮಗಾರಿಗೆ ಅಡ್ಡಿಪಡಿಸಿದರೆ ಅವರ ವಿರುದ್ಧ ಪೊಲೀಸ್ ಗೆ ದೂರು ನೀಡಬೇಕು ಎಂದು ಸೂಚಿಸಿದರು.

ಬಳಿಕ ದಲಿತ ಮುಖಂಡರು ಎಂಟು ದಿನದ ಅವಧಿಯನ್ನು ನೀಡಿದ್ದು ಅಲ್ಲಿಯವರೆಗೆ ನಿರ್ಮಿಸದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದರು. ಇದಕ್ಕೆ ಧ್ವನಿಗೂಡಿಸಿದ ಇತರ ಮುಖಂಡರು ದಲಿತ ಸಮುದಾಯದ ಜಿಲ್ಲಾ ಪಂಚಾಯತ್ ಸದಸ್ಯರ ಬೇಡಿಕೆಯನ್ನು ಈಡೇರಿಸದಿದ್ದರೆ ಇಡೀ ತಾಲೂಕಿನ ದಲಿತ ಸಮುದಾಯ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ತಾ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಟ ಕುಸುಮಾಧರ್, ಸಮಾಜಕಲ್ಯಾಣ ಇಲಾಖಾ ಅಧಿಕಾರಿ ಹೇಮಚಂದ್ರ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.