ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷತೆಗೆ ಮೀಸಲಾತಿ ಪ್ರಕಟ

ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷತೆಗೆ ಮೀಸಲಾತಿ ಪ್ರಕಟ

GK   ¦    Mar 12, 2020 04:06:04 PM (IST)
ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷತೆಗೆ ಮೀಸಲಾತಿ ಪ್ರಕಟ

ಸುಳ್ಯ: ಚುನಾವಣೆ ನಡೆದು ಫಲಿತಾಂಶ ಹೊರ ಬಂದು ಬರೋಬರಿ 10 ತಿಂಗಳ ಬಳಿಕ ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಚುನಾವಣೆ ನಡೆದಾಗ 20 ವಾರ್ಡ್‍ಗಳ ಪೈಕಿ 14 ಸ್ಥಾನಗಳನ್ನು ಪಡೆದು ಬಿಜೆಪಿ ಸತತ ನಾಲ್ಕನೇ ಬಾರಿಗೆ ನಗರ ಪಂಚಾಯತ್‍ನಲ್ಲಿ ಅಧಿಕಾರ ಹಿಡಿದಿತ್ತು. ಕಾಂಗ್ರೆಸ್ ನಾಲ್ಕು ಸ್ಥಾನ ಪಡೆದಿದ್ದರೆ ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿರುವ ಕಾರಣ ಬಿಜೆಪಿಯ 14 ಸದಸ್ಯರೂ ಅರ್ಹರೇ. ನಗರ ಪಂಚಾಯಿತಿಯ 10ನೇ ವಾರ್ಡ್‍ನಿಂದ ಆಯ್ಕೆಯಾದ ಸದಸ್ಯ ಬಿಜೆಪಿ ನಗರ ಅಧ್ಯಕ್ಷರೂ ಆಗಿರುವ ವಿನಯಕುಮಾರ್ ಕಂದಡ್ಕ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚು. ಅಲ್ಲದೆ ಹಿರಿಯರಾದ ಬಾಲಕೃಷ್ಣ ರೈ ದುಗಲಡ್ಕ, ಬುದ್ಧನಾಯ್ಕ ಅವರ ಹೆಸರು ಕೂಡ ರೇಸ್‍ನಲ್ಲಿದೆ.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವಿಭಾಗಕ್ಕೆ ಮೀಸಲಾಗಿದೆ. ಬಿಜೆಪಿಯಿಂದ ಒಂಭತ್ತು ಮಂದಿ ಮಹಿಳಾ ಸದಸ್ಯರು ಆಯ್ಕೆಯಾಗಿರುವ ಕಾರಣ ಉಪಾಧ್ಯಕ್ಷತೆಗೆ ಹೆಚ್ಚಿನ ಜಿದ್ದಾ ಜಿದ್ದಿನ ಪೈಪೋಟಿ ಉಂಟಾಗುವ ಸಾಧ್ಯತೆ ಇದೆ. ಎರಡನೇ ಬಾರಿ ನಗರ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾದ ಸರೋಜಿನಿ ಪೆಲ್ತಡ್ಕ, ಈ ಹಿಂದೆ ನಾಮ ನಿರ್ದೇಶಿತ ಸದಸ್ಯೆಯಾಗಿದ್ದು ಈ ಬಾರಿ ಸದಸ್ಯೆಯಾಗಿರುವ ಶಶಿಕಲಾ, ಸದಸ್ಯರಾದ ಕಿಶೋರಿ ಶೇಟ್, ಶೀಲಾ ಅರುಣ ಕುರುಂಜಿ ಇವರಲ್ಲಿ ಒಬ್ಬರಿಗೆ ಉಪಾಧ್ಯಕ್ಷತೆ ಸ್ಥಾನ ಒಲಿಯುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.