ನಿಡ್ಡೋಡಿಯಲ್ಲಿ ಫೋಟೋ ಸರ್ವೇ: ಗ್ರಾಮಸ್ಥರ ವಿರೋಧ

ನಿಡ್ಡೋಡಿಯಲ್ಲಿ ಫೋಟೋ ಸರ್ವೇ: ಗ್ರಾಮಸ್ಥರ ವಿರೋಧ

DSK   ¦    May 15, 2019 09:20:20 AM (IST)
ನಿಡ್ಡೋಡಿಯಲ್ಲಿ ಫೋಟೋ ಸರ್ವೇ: ಗ್ರಾಮಸ್ಥರ ವಿರೋಧ

ಮೂಡುಬಿದಿರೆ: ಇಲ್ಲಿಗೆ ಸಮೀಪದ ನಿಡ್ಡೋಡಿ ಗ್ರಾಮದ ಕೊಲತ್ತಾರು ಪದವು ಎಂಬಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ಸ್ಥಳೀಯ ಭೌಗೋಳಿಕ ಛಾಯಾಗ್ರಹಣ ಮತ್ತಿತರ ದಾಖಲೆ ಸೆರೆಹಿಡಿಯಲು ಮಂಗಳವಾರ ಆಗಮಿಸಿದ್ದ ದೆಹಲಿ ಮೂಲದ ಸಂಸ್ಥೆಯ ಕಾರ್ಯಕರ್ತರಿಗೆ ಸ್ಥಳೀಯ ಗ್ರಾಮಸ್ಥರು ಹಾಗೂ ಮಾತೃಭೂಮಿ ಸಂರಕ್ಷಣಾ ಸಮಿತಿ ಕಾರ್ಯಕರ್ತರು ತಡೆಯೊಡ್ಡಿದ್ದಾರೆ.

ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಅದಾನಿ ವಿದ್ಯುದೀಕರಣ ಸಂಸ್ಥೆಯ ವಿದ್ಯುತ್ ಪ್ರಸರಣ ಕಾರ್ಯಕ್ಕೆಂದು ದೆಹಲಿ ಗ್ಲೋಬಲ್ ಎನರ್ಜಿ ಪ್ರೈ.ಲಿ. ಸಂಸ್ಥೆಯ ಮೂವರು ಸಿಬಂದಿ ಡ್ರೋನ್ ಕ್ಯಾಮೆರಾ ಮೂಲಕ ಛಾಯಾಚಿತ್ರ ಸೆರೆಹಿಡಿಯಲು ಯತ್ನಿಸಿದಾಗ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಸಂಸ್ಥೆಯ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಛಾಯಾಚಿತ್ರ ಸೆರೆಹಿಡಿಯುವ ಕಾರಣ ಮತ್ತು ಉದ್ದೇಶ ತಿಳಿಸುವಂತೆ ಪಟ್ಟುಹಿಡಿದ ಸ್ಥಳೀಯರಿಗೆ ಸೂಕ್ತ ಮಾಹಿತಿ ಹಾಗೂ ದಾಖಲೆ ನೀಡುವಲ್ಲಿ ವಿಫಲರಾದರು. ತಮ್ಮನ್ನು ಬಿಟ್ಟುಬಿಡುವಂತೆ ಸಂಸ್ಥೆಯವರು ವಿನಂತಿಸಿದರಾದರೂ ಅದಕ್ಕೊಪ್ಪದ ಪ್ರತಿಭಟನಾಕಾರರು ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಸ್ಥಳೀಯರಿಗೆ ಮಾಹಿತಿ ನೀಡದೆ ಆಗಮಿಸಿದ್ದರ ವಿರುದ್ಧ ಸ್ಥಳೀಯರು ಆಕ್ರೋಶಿತಗೊಂಡರು.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಪಿಡಿಓ ಉಗ್ಗಪ್ಪ ಮೂಲ್ಯ ಇದ್ದರು.

ಘಟನೆ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ಮಾತೃಭೂಮಿ ಸಂರಕ್ಷಣಾ ಸಮಿತಿ ದೂರು ಸಲ್ಲಿಸಿದೆ. ಸಮಿತಿ ಅಧ್ಯಕ್ಷ ಅಲ್ಫೋನ್ಸ್ ಡಿ'ಸೋಜ, ಕಾರ್ಯದರ್ಶಿ ವಿನೋದರ ಸುವರ್ಣ, ಸಂಚಾಲಕ ಕಿರಣ್ ಮಂಜನಬೈಲು, ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಂದರ ಪೂಜಾರಿ, ಸದಸ್ಯ ರಾಮ ಗೌಡ, ಸಮಿತಿ ಪದಾಧಿಕಾರಿಗಳಾದ ಜನಾರ್ದನ ಗೌಡ, ಗೋಪಾಲ ಗೌಡ, ರವಿ ಗೌಡ, ಸತೀಶ ಶೆಟ್ಟಿ, ಬಾಲರಾಜ, ಸಂದೀಪ ಸುವರ್ಣ, ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಲೋಕನಾಥ ಸಾಲ್ಯಾನ್, ಮಾಧವ ಗೌಡ ಮೊದಲಾದವರಿದ್ದರು.