ಕೂಕ್ರಬೆಟ್ಟು ಶಾಲೆ: ಮಕ್ಕಳ ಗ್ರಾಮಸಭೆ

ಕೂಕ್ರಬೆಟ್ಟು ಶಾಲೆ: ಮಕ್ಕಳ ಗ್ರಾಮಸಭೆ

DA   ¦    Dec 02, 2019 07:00:35 PM (IST)
ಕೂಕ್ರಬೆಟ್ಟು ಶಾಲೆ: ಮಕ್ಕಳ ಗ್ರಾಮಸಭೆ

ಬೆಳ್ತಂಗಡಿ: ಮರೋಡಿ ಗ್ರಾಮ ಪಂಚಾಯಿತಿ ವತಿಯಿಂದ ಕೂಕ್ರಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಗ್ರಾಮಸಭೆಯು ಶಾಲಾ ವಿದ್ಯಾರ್ಥಿ ನಾಯಕಿ ಚಂದ್ರಿಕಾಳ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ಶಾಲೆಗೆ ಸ್ಮಾರ್ಟ್‌ ಕ್ಲಾಸ್ಟ್‌ ಸೌಲಭ್ಯವನ್ನು ಸರ್ಕಾರದಿಂದ ನೀಡಬೇಕು, ಆಟೋಪಕರಣ, ಪೀಠೋಪಕರಣ ಮತ್ತು ಕಲಿಕೋಪಕರಣಗಳನ್ನು ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಬೇಡಿಕೆಯಿಟ್ಟರು. ಶಾಲಾ ಕಟ್ಟಡ ದುರಸ್ತಿ ಮಾಡಬೇಕು, ಪ್ರತಿ ತರಗತಿಯಲ್ಲಿ ಫ್ಯಾನ್‌ ವ್ಯವಸ್ಥೆ ಮಾಡಬೇಕು, ಸುಸಜ್ಜಿತ ಆಟದ ಮೈದಾನ ನಿರ್ಮಿಸಬೇಕು, ಕಂಪ್ಯೂಟರ್‌ ವ್ಯವಸ್ಥೆ ಕಲ್ಪಿಸಬೇಕು ಹೀಗೆ ಹತ್ತು ಹಲವು ಬೇಡಿಕೆಗಳನ್ನು ಸಭೆಯಲ್ಲಿ ಮಂಡಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾಲತಾ ಮಾತನಾಡಿ, ‘ಮಕ್ಕಳು ದೇಶದ ದೊಡ್ಡ ಆಸ್ತಿ. ಅವರ ಶಿಕ್ಷಣಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯ ಆಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಸಾಕಷ್ಟು ಸೌಕರ್ಯಗಳನ್ನು ನೀಡಲಾಗುತ್ತಿದ್ದು, ಅದನ್ನು ಎಲ್ಲರೂ ಬಳಸಿಕೊಳ್ಳಬೇಕು’ ಎಂದು ಹೇಳಿದರು.

ಮಕ್ಕಳ ಬೇಡಿಕೆಗೆ ಪ್ರತಿಕ್ರಿಸಿದ ಆಶಾಲತಾ, ‘ಕೂಕ್ರಬೆಟ್ಟು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ₹ 2 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ. ಶಾಲೆಯ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ಶಾಲಾ ವಿದ್ಯಾರ್ಥಿ ನಾಯಕಿ ಚಂದ್ರಿಕಾ ಮಾತನಾಡಿ, ‘ಮಕ್ಕಳ ಗ್ರಾಮಸಭೆಯ ಮೂಲಕ ನಮ್ಮ ಬೇಡಿಕೆಗಳನ್ನು ಮಂಡಿಸಲು ಅವಕಾಶ ನೀಡಿರುವುದು ಖುಷಿತಂದಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಸಾಮಾಜಿಕ ತಿಳಿವಳಿಕೆ ಹೆಚ್ಚುತ್ತದೆ. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ನಾವೇ ಅದೃಷ್ಟಶಾಲಿಗಳು’ ಎಂದು ಹೇಳಿದರು.

ಶಾಲಾ ಮುಖ್ಯಶಿಕ್ಷಕಿ ಸುಫಲಾ, ಮರೋಡಿ ಗ್ರಾಮ ಪಂಚಾಯಿತಿ ಸದಸ್ಯೆ ಪದ್ಮಶ್ರೀ ಜೈನ್‌, ಶಾಲಾ ಶಿಕ್ಷಕರು, ಗ್ರಾಮಸ್ಥರು, ಮಕ್ಕಳ ಪೋಷಕರು, ಪಂಚಾಯಿತಿ ಸಿಬ್ಬಂದಿ ಇದ್ದರು.