ಡಾ.ಆಳ್ವರಿಗೆ ಸಹಕಾರಿ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ

ಡಾ.ಆಳ್ವರಿಗೆ ಸಹಕಾರಿ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ

Nov 20, 2015 11:13:59 AM (IST)

ಮೂಡುಬಿದರೆ: ಶತಮಾನೋತ್ಸವದ ಸಂಭ್ರಮದಲ್ಲಿರುವ ಮೂಡಬಿದಿರೆ ಕೋ ಓಪರೇಟಿವ್ ಸರ್ವೀಸ್ ಬ್ಯಾಂಕ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರಿನ ಸಹಕಾರಿ ಇಲಾಖೆ, ಮಂಗಳೂರು ಪ್ರಾ. ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು ಮೂಡಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ  ಸಹಕಾರ ಸಪ್ತಾಹದ ಸಮಾರೋಪ ಸಮಾರಂಭವು ಎಂಸಿಎಸ್ ಬ್ಯಾಂಕ್ ನ ಕಲ್ಪವೃಕ್ಷ ಸಭಾಭವನದಲ್ಲಿ ನ.20ರಂದು ಅಪರಾಹ್ನ  3.30ಕ್ಕೆ  ನಡೆಯಲಿದ್ದು  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರಿಗೆ  ಸಹಕಾರ ಕಲ್ಪವೃಕ್ಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಮಾಹೆ ನಿವೃತ್ತ ಉಪಕುಲಪತಿ ಪದ್ಮಭೂಷಣ ಡಾ.ಬಿ.ಎಂ. ಹೆಗ್ಡೆ ಅವರು ಪ್ರಶಸ್ತಿ ಪ್ರದಾನಗೈಯಲಿದ್ದಾರೆ. ಸಹಕಾರಿ ಕಲ್ಪವೃಕ್ಷ  ಪ್ರಶಸ್ತಿಯು 10 ಗ್ರಾಂ ಚಿನ್ನದ ಪದಕ, ಬೆಳ್ಳಿಯ ಸ್ಮರಣಿಕೆ, ತಾಮ್ರ ಫಲಕ ಸಹಿತ ಸಾಂಪ್ರದಾಯಿಕ ಸಮ್ಮಾನವನ್ನು ಒಳಗೊಂಡಿದೆ ಎಂದು ಬ್ಯಾಂಕಿನ ಅಧ್ಯಕ್ಷ  ಕೆ. ಅಮರನಾಥ ಶೆಟ್ಟಿ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಸಚಿವ ಕೆ.ಅಭಯಚಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಎಸ್ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ  ಡಾ.ಎಂ. ಎನ್. ರಾಜೇಂದ್ರ ಕುಮಾರ್ ಎಂಸಿಎಸ್ ಬ್ಯಾಂಕಿನ ನೂತನ ಲಾಂಛನವನ್ನು ಬಿಡುಗಡೆಗೊಳಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಡಿಆರ್ ಸಿಎಸ್ ಬಿ.ಕೆ. ಸಲೀಂ, ಪುರಸಭಾಧ್ಯಕ್ಷೆ ರೂಪಾ ಎಸ್. ಶೆಟ್ಟಿ, ಮಂಗಳೂರಿನ ಸಿ.ಎ. ದಯಾಶರಣ್ ಶೆಟ್ಟಿ  ಭಾಗವಹಿಸಲಿದ್ದಾರೆ.

ಬ್ಯಾಂಕಿನ ಹಿರಿಯ ಸದಸ್ಯರಿಗೆ ಸಹಕಾರ ಪ್ರಶಸ್ತಿ, ವ್ಯವಸ್ಥಾಪಕರು ಮತ್ತು ಇಲಾಖಾಕಾರಿಗಳಿಗೆ ಸಮ್ಮಾನ, ಸಹಕಾರಿ ಕೇಂದ್ರದ ರ್ಯಾಂಕ್ ವಿಜೇತರಿಗೆ ಸಮ್ಮಾನ, ವಿಕಲ ಚೇತನ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಮೂಡುಬಿದರೆ ಪರಿಸರದ, 7ರಿಂದ 10ನೇ ತರಗತಿಯಲ್ಲಿ ಕನ್ನಡ ಮತ್ತು ಹಿಂದಿಯಲ್ಲಿ  ಗರಿಷ್ಟ ಅಂಕ ಗಳಿಸಿದ 52 ಮಂದಿಗೆ ತಲಾ ರೂ. 750 ನಗದು ಬಹುಮಾನ ನೀಡಲಾಗುವುದು ಎಂದು ಅವರು ವಿವರಿಸಿದರು.

ಮೂಡಬಿದಿರೆ ಮತ್ತು ಪರಿಸರದ ರೋಗಿಗಳಿಗೆ ಅನುಕೂಲವಾಗುವಂತೆ ಮೂಡಬಿದಿರೆಯ ಆಸ್ಪತ್ರೆಗೆ ರೂ. 20 ಲಕ್ಷ ವೆಚ್ಚದಲ್ಲಿ  ಡಯಾಲಿಸೀಸ್ ಮತ್ತು ವೆಂಟಿಲೇಟರ್ ಯಂತ್ರ ನೀಡುವ ಯೋಜನೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಜಾರ್ಜ್ ಮೋನಿಸ್, ಹಿರಿಯ ನಿರ್ದೇಶಕ ಗಣೇಶ್ ನಾಯಕ್, ಸಿಇಓ ಚಂದ್ರಶೇಖರ್ ಉಪಸ್ಥಿತರಿದ್ದರು.