ಕೃಷಿ ಪರಂಪರೆ ಉಳಿಸಲು ಹೋರಾಟ: ರವಿಕಿರಣ ಪುಣಚ

ಕೃಷಿ ಪರಂಪರೆ ಉಳಿಸಲು ಹೋರಾಟ: ರವಿಕಿರಣ ಪುಣಚ

GK   ¦    Nov 18, 2020 05:41:30 PM (IST)
ಕೃಷಿ ಪರಂಪರೆ ಉಳಿಸಲು ಹೋರಾಟ: ರವಿಕಿರಣ ಪುಣಚ

ಸುಳ್ಯ: ನಮ್ಮ ನಾಗರಿಕತೆ ಬೆಳೆದಿರುವುದು ಕೃಷಿಯಿಂದ. ನಮ್ಮ ನಾಗರಿಕತೆ ಮತ್ತು ಬದುಕು ಉಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಮತ್ತು ಇತರ ಮಸೂದೆಗಳನ್ನು ವಿರೋಧಿಸಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ ಹೇಳಿದ್ದಾರೆ.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ರೈತ ದಲಿತ ಕಾರ್ಮಿಕ ಚಳುವಳಿಗಳ ಒಕ್ಕೂಟ ದಕ್ಷಿಣ ಕನ್ನಡ ಇದರ ಆಶ್ರಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ಮತ್ತು ಇತರ ಮಸೂದೆಗಳನ್ನು ವಿರೋಧಿಸಿ ದ.ಕ.ಜಿಲ್ಲೆಯಾದ್ಯಂತ ಸಂಚರಿಸುವ ವಾಹನ ಜಾಥಾದ ಅಂಗವಾಗಿ ಸುಳ್ಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯದ ಜನವಿರೋಧಿ ನೀತಿಗಳಿಂದ ಕೃಷಿಕರು ಸೇರಿ ಜನತೆ ಆತಂಕದಲ್ಲಿ ಸಿಲುಕಿದ್ದಾರೆ. ದೇಶದ ಜಿಡಿಪಿ ಕುಸಿದಿದೆ, ಸಾಲ ಮಿತಿ ಮೀರಿದೆ, ದೇಶದ ಖಜಾನೆ ಖಾಲಿಯಾಗಿದೆ. ಸರ್ಕಾರಗಳ ತಪ್ಪು ನೀತಿಯಿಂದ ಈ ರೀತಿ ಆಗುತಿದೆ, ಇದರ ವಿರುದ್ಧ ಜನಾಂದೋಲನ ಆರಂಭಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಸುಳ್ಯ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ದ.ಕ.ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲಿಯಾನ್, ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಪಾದೆಕಲ್ಲು, ಜಿಲ್ಲಾ ಉಪಾಧ್ಯಕ್ಷರಾದ ದಿವಾಕರ ಪೈ, ಈಶ್ವರ ಭಟ್ ಬಡಿಲ, ಪದ್ಮನಾಭ ಗೌಡ ನೂಜಾಲು ಮತ್ತಿತರರು ಮಾತನಾಡಿದರು.