ನುಡಿಸಿರಿಯಲ್ಲಿ ಸಾಂಸ್ಕೃತಿಕ ವೈಭವ

ನುಡಿಸಿರಿಯಲ್ಲಿ ಸಾಂಸ್ಕೃತಿಕ ವೈಭವ

Nov 28, 2015 10:53:43 AM (IST)

ಮೂಡುಬಿದರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನ ಬರಪೂರ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಕಲಾರಸಿಕರ ಮನ ರಂಜಿಸಿತು. ನಾಡಿನ ಪ್ರಖ್ಯಾತ ಕಲಾವಿದರೊಂದಿಗೆ ಯುವ ಹಾಗೂ ಸ್ಥಳೀಯ ಕಲಾವಿದರಿಗೂ ನುಡಿಸಿರಿ ವೇದಿಕೆಯಾಯಿತು.


ರತ್ನಾಕರವರ್ಣಿ ವೇದಿಕೆಯಲ್ಲಿ ದಾಸರದ ಪದಗಳು, ಕೆ.ವಿ ಸುಬ್ಬಣ ಬಯಲು ರಂಗಮಂದಿರದಲ್ಲಿ ಜನಪದ ಗಾಯನ, ಜಯಲಕ್ಷ್ಮೀ ಆಳ್ವ ವೇದಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಗಾಯನ, ಬಿ.ವಿ ಕಾರಂತ ವೇದಿಕೆ ಮೈಸೂರು ಸಂಕಲ್ಪ ತಂಡದಿಂದ ಜತೆಗಿರುವನು ಚಂದಿರ ನಾಟಕ ಪ್ರದರ್ಶನಗೊಂಡಿತು. ಮಿಮಿಕ್ರಿ ದಯಾನಂದ, ಇಂದುಶ್ರೀ ಅವರ ಮಾತನಾಡುವ ಗೊಂಬೆ, ಉಮೇಶ್ ಮಿಜಾರು ತಂಡದಿಂದ ತೆಲಿಕೆದ ಗೊಂಚಿಲ್ ಕಾರ್ಯಕ್ರಮಗಳು ಕೆ.ಎನ್.ಟೈಲರ್ ವೇದಿಕೆಯಲ್ಲಿ ಪ್ರೇಕ್ಷಕರನ್ನು ಹಾಸ್ಯದ ಕಡಲಲ್ಲಿ ತೇಲಿಸಿತು. ಮಾ.ವಿಠಲ ಶೆಟ್ಟಿ ವೇದಿಕೆಯಲ್ಲಿ ವಚನ ಗಾಯನ, ಜನಪದ ಝೆಂಕಾರ ಸಪ್ತ ತಾಂಡವ ಸಹಿತ ಶಾಸ್ತ್ರೀಯ, ಜನಪದ ಕಾರ್ಯಕ್ರಮಗಳು ನಡೆಯಿತು. ಕು.ಶಿ ಹರಿದಾಸ ಭಟ್ ವೇದಿಕೆಯಲ್ಲಿ ನೃತ್ಯರೂಪಕ ನಡೆಯಿತು.  

ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ತಂಪು ನೀಡಿದರೆ, ವಿದ್ಯಾಗಿರಿಯಲ್ಲಿ ಹಾಕಲಾದ ವಿದ್ಯುತ್ ದೀಪಾಲಂಕರ ನೆರೆದವರು ಕಣ್ಣನ್ನು ತಂಪಾಗಿಸಿತು.

ಆಳ್ವಾಸ್ ನುಡಿಸಿರಿಯಲ್ಲಿ ಚಿತ್ರ ಸಂತೆಯ ಕಾಲಮೇಳ

ಅಲ್ಲಿ ಕುಂತ್ರೆ ಕ್ಷಣಾರ್ಧದಲ್ಲೇ ನಿಮ್ಮ ಭಾವಚಿತ್ರ ಸಿದ್ಧ. ಪ್ರಸಿದ್ಧ, ಯುವ ಕಲಾವಿದರ ಚಿತ್ರ ಪ್ರದರ್ಶನ ಆ ಮೇಳದ ಸೂತ್ರ. ಇದು ಚಿತ್ರ ಸಂತೆಯ ಕಾಲಮೇಳ. ಆಳ್ವಾಸ್ ನುಡಿಸಿರಿಯಲ್ಲಿ ಇದೇ ಮೊದಲ ಬಾರಿಗೆ ಕಂಡುಬಂದ ವಿಭಿನ್ನ ರೀತಿಯ ಕಲಾಪ್ರದರ್ಶನ, ಮಾರಾಟ ವ್ಯವಸ್ಥೆ ಜನರ ಗಮನಸೆಳೆಯುತ್ತಿದೆ.

20 ಜಿಲ್ಲೆಗಳ 64 ಕಲಾವಿದರ 72 ಮಳಿಗೆಗಳು, 1500ಕ್ಕೂ ಅಧಿಕ ಕಲಾಕೃತಿಗಳು ಕಲಾಮೇಳದಲ್ಲಿದೆ. ಒಂದಕ್ಕೊಂದು ಭಿನ್ನ ರೀತಿಯ ಕಲಾಕೃತಿಯ ಅಪೂರ್ವ ಒಂದೇ ಕಡೆ ನೋಡುವ ಅವಕಾಶ ಕಲಾ ರಸಿಕರದ್ದು. ನುಡಿಸಿರಿಯ ಮೊದಲ ದಿನದಿಂದಲೇ ಪ್ರಾರಂಭವಾದ ಈ ಕಾಲಮೇಳದಲ್ಲಿ, ತ್ರೀಡಿ ಚಿತ್ರ, ಚಿತ್ರದ ವಿಷಯಗಳು ಹೊಳೆಯುವಂತೆ ಕಾಣುವ ವಿಶಿಷ್ಟ ಚಿತ್ರಗಳು ಕಲಾವಿದರ ಸೃಜನಶೀಲತೆಯನ್ನು ಕಲಾರಸಿಕರು ಕೊಂಡಾಡುವಂತೆ ಮಾಡುತ್ತದೆ. ಕ್ಯಾನ್ವಸ್ ನಲ್ಲಿ ಬಣ್ಣಗಳ ಉಪಯೋಗಿಸದೆ ಮರದ ಚೆಕ್ಕೆ, ಮರದ ತುಂಡುಗಳನ್ನೇ ಬಳಸಿ ಮಾಡಿರುವ ಚಿತ್ರ ಗಮನಸೆಳೆಯುತ್ತದೆ. ಕ್ಯಾನ್ವಸನ್ನು ಸ್ಪರ್ಶಿಸುವಾಗ ಒರಟು ರೀತಿಯಲ್ಲಿ ಬಣ್ಣಗಳನ್ನು ಜೋಡಿಸಿದ್ದು, ಅದರ ಮೇಲೆ ಬೆಳಕು ಹಾಯಿಸಿದಾಗ ಹೊಳೆಯುವ ಅಪರೂಪದ ಕಲಾಕೃತಿಯು ಪ್ರದರ್ಶನದಲ್ಲಿದೆ.  ಉಡುಪಿ ಚಿತ್ರ ಕಲಾಮಂದಿರ ಕಲಾವಿದರ ಚಿತ್ರಗಳು ಸೇರಿದಂತೆ ನಾಡಿನ ವಿವಿಧ ಜಿಲ್ಲೆಗಳ ವೃತ್ತಿಪರ, ಹವ್ಯಾಸಿ ಕಲಾವಿದರಿಗೆ ಕಲಾಕೃತಿಗಳನ್ನು ಮಾರಾಟ ಮಾಡಲು ಇದೇ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ.

ಚಿತ್ರಸಂತೆಯಲ್ಲಿ ಹಾಗೇ ಕುಂತ್ರೆ ಕ್ಷಣಾರ್ಧದಲ್ಲಿ ಚಿತ್ರಬಿಡಿಸಿ ಕೊಡುವ ನಾಲ್ಕು ಕಲಾವಿದರು ಈ ಕಲಾಶಿಬಿರದಲ್ಲಿದ್ದಾರೆ. ಈ ನಾಲ್ಕು ಜನರಲ್ಲಿ ತಮ್ಮ ಚಿತ್ರ ಬಿಡಿಸಿಕೊಳ್ಳಲು ಜನರು ಕಾಯುವುದು ಸಾಮಾನ್ಯ ದೃಶ್ಯ. ನುಡಿಸಿರಿ ಕಲೆ ಮಹಾಪೋಷಕ. ಅಳ್ವಾಸ್ ಚಿತ್ರಸಿರಿಯ ಮೂಲಕ ನಾಡಿನ ಹೆಸರಾಂತ ಕಲಾವಿದರು ಚಿತ್ರ ನುಡಿಸಿರಿಗೆ ಚಿತ್ತಾರವಾದ, ರಾಜ್ಯದೆಲ್ಲೆಡೆಯ ಯುವ ಕಲಾವಿದರಿಗೆ ಕಲಾಮೇಳ ಉತ್ತಮ ಅವಕಾಶ ಎಂಬುದರಲ್ಲಿ ಸಂಶಯವಿಲ್ಲ ಎಂಬುವುದು ಕಲಾರಸಿಕ ಮಾತು.