ಆಳ್ವಾಸ್ ವಿದ್ಯಾರ್ಥಿಸಿರಿಗೆ ಚಾಲನೆ: ಸಾಧಕರಿಗೆ ಪ್ರಶಸ್ತಿ ಪ್ರದಾನ

ಆಳ್ವಾಸ್ ವಿದ್ಯಾರ್ಥಿಸಿರಿಗೆ ಚಾಲನೆ: ಸಾಧಕರಿಗೆ ಪ್ರಶಸ್ತಿ ಪ್ರದಾನ

Nov 26, 2015 01:08:28 PM (IST)

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ವಿದ್ಯಾರ್ಥಿಸಿರಿ-2015 ವಿದ್ಯಾರ್ಥಿ ಸಾಹಿತ್ಯ-ಸಂಸ್ಕೃತಿ ಸಮ್ಮೇಳನ ರತ್ನಾಕರವರ್ಣಿ ವೇದಿಕೆಯಲ್ಲಿ ಗುರುವಾರ ಚಾಲನೆ ನೀಡಲಾಯಿತು.


ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಿ.ಶೇಷಾದ್ರಿ ಸಮ್ಮೇಳನಕ್ಕೆ ಚಾಲನೆ ನೀಡಿದರು.  ವಿದ್ಯಾರ್ಥಿಗಳಿಗೆ ವಿದ್ಯೆ ಬೆಳಕು. ಸೃಜನಶೀಲತೆ, ಕ್ರೀಯಾಶೀಲತೆಯೊಂದಿಗೆ ಈ ಬೆಳಕಲ್ಲಿ ಮಿಂದೆದರೆ ಜೀವನ ಪಾವನವಾಗುತ್ತದೆ. ಚಿಂತನಶೀಲತೆ ವಿದ್ಯಾರ್ಥಿಗಳಲ್ಲಿರಬೇಕು. ಇಂದು ವಿವಿಧ ಮೂಲಗಳಿಂದ ನಮಗೆ ಕ್ಷಣಾರ್ಧದಲ್ಲಿ ಮಾಹಿತಿ ಸಿಗುತ್ತದೆ. ತಂತ್ರಜ್ಞಾನದ ಬಳಕೆಯೂ ಸುಲಭವಾಗಿದೆ. ಈ ತಂತ್ರಜ್ಞಾನಗಳ ಮೂಲಕ ಸಿಗುವ ಮಾಹಿತಿಯೇ ಇಂದು ನಮ್ಮ ದಾರಿ ತಪ್ಪಿಸುತ್ತಿದೆ. ತಂತ್ರಜ್ಞಾನವನ್ನು ಎಚ್ಚರಿಕೆಯೊಂದಿಗೆ ಬಳಸಬೇಕಾಗಿದೆ. ಸ್ವಾರಸ್ಯಕರ ಜೀವನಕ್ಕೆ ಸಂಶೋಧನಾತ್ಮಕ ಅಚ್ಚರಿಯೂ ಅಗತ್ಯ ಎಂದು ಅಭಿಪ್ರಾಯಪಟ್ಟರು.
 
ನನ್ನನ್ನು ಯಾವುದೇ ಅಸಹಿಷ್ಣುತೆ ಕಾಡುತ್ತಿಲ್ಲ. ಆದರೆ ದ.ಕ ಜಿಲ್ಲೆಯ ಬಿಸಿಲಿನ ಉಷ್ಣತೆಯನ್ನು ನನ್ನನು ಹೆಚ್ಚು ಕಾಡುತ್ತಿದೆ ಎಂದು ಹಾಸ್ಯ ಮಾತುಗಳನ್ನಾಡಿದ ಶೇಷಾದ್ರಿಯವರು, ಅಸಹಿಷ್ಣುತೆ ಬಗ್ಗೆ ಮಾತನಾಡುವವರು ತಾವು ಯಾವ ಅಸಹಿಷ್ಣತೆಯ ಬಗ್ಗೆ ಮಾತನಾಡುತ್ತಿದ್ದೇವೆ ಎಂಬುದನ್ನು ಅವಲೋಕಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ನಮ್ಮ ಭಾಷೆ, ಸಂಸ್ಕೃತಿಯತ್ತ ಮನಸ್ಸನ್ನು ತಲುಪಿಸಬೇಕು. ಕನ್ನಡದ ಉಳಿವಿಗಾಗಿ ನಿರಂತರ ಹೋರಾಟ ಮಾಡುವಂತಹ ಪರಿಸ್ಥಿತಿಯಿದೆ. ನಮ್ಮ ನಾಡು-ನುಡಿಯ ಬಗ್ಗೆ ವಿದ್ಯಾರ್ಥಿಗಳು ಚಿಂತನೆ ಮಾಡಬೇಕಾಗಿದೆ ಎಂದರು.

ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿ ಪ್ರದಾನ:
ಸಾಗರದ ಕಿನ್ನರಿ ಮೇಳ ತುಮರಿ ತಂಡಕ್ಕೆ ನೀಡಲಾದ ವಿದ್ಯಾರ್ಥಿಸಿರಿ ಪ್ರಶಸ್ತಿಯನ್ನು ಅದರ ನಿರ್ದೇಶಕ ಕೆ.ಜಿ ಕೃಷ್ಣಮೂರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಟಿ.ಎಸ್ ನಾಗರಾಜ ಶೆಟ್ಟಿ ತಿಪಟೂರು, ಗಾಯಕ ಗಗನ್ ಜಿ.ಗಾಂವ್ಕರ್ ಅವರಿಗೆ ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಬಾಲ ಪ್ರತಿಭೆ ಪಂಚಮಿ ಮಾರೂರು ಅವರಿಗೆ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಸಮ್ಮೇಳನದಲ್ಲಿ ಗಗನ್ ಮುಚ್ಚಮರೆಯಿಲ್ಲದೆ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಅಂತರಾತ್ಮ ಎಂಬ ಗೀತೆಯನ್ನು ಹಾಡಿದರು.

ಆಳ್ವಾಸ್ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅಮೋಘ ಹೆಗ್ಡೆ ಅವರ ಮುತ್ತುಚಿಪ್ಪು ಕೃತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಲೋಕಾರ್ಪಣೆಗೊಳಿಸಿದರು.

 

More Images