ಕೇಂದ್ರ ಸರ್ಕಾರ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ

ಕೇಂದ್ರ ಸರ್ಕಾರ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ

DA   ¦    Jun 16, 2020 07:11:00 PM (IST)
ಕೇಂದ್ರ ಸರ್ಕಾರ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ

ಬೆಳ್ತಂಗಡಿ:  ದೇಶವನ್ನು ವಿಶ್ವಗುರು ಮಾಡುತ್ತೇವೆ ಎಂದ ಪ್ರಧಾನಿ ನರೇಂದ್ರ ಮೋದಿ , ಕೊರೋನಾ ವೈರಸ್ ತಡೆಗಟ್ಟಲು ವಿಫಲಗೊಂಡಿದ್ದು ಅವರ ಮುಖವಾಡ ಕಳಚಿ ಬಿದ್ದಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ, ದ.ಕ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಆರೋಪಿಸಿದರು.

ಅವರು ಮಂಗಳವಾರ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ದೇಶವು ಹಿಂದೆಂದಿಗಿಂತಲೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಕೊರೋನಾ ವೈರಸ್ ವ್ಯಾಪಕಗೊಳ್ಳುತ್ತಿದ್ದರೂ ಅದನ್ನು ತಡೆಗಟ್ಟುವಲ್ಲಿ  ನರೇಂದ್ರ ಮೋದಿ ಸರ್ಕಾರ  ಸಂಪೂರ್ಣ ವಿಫಲವಾಗಿದೆ.  ಲಾಕ್ ಡೌನ್ ನಿಂದಾಗಿ ಸಾಮಾನ್ಯ ಜನರ ಬದುಕು , ವಲಸೆ ಕಾರ್ಮಿಕರು , ದುಡಿಯುವ ವರ್ಗದ ಜನರ ಅತ್ಯಂತ ದುಸ್ತರಗೊಂಡಿದೆ. ಆಹಾರವಿಲ್ಲದೆ ಜನರು ಸಾಯುತ್ತಿರುವ ಘಟನೆಗಳು ನಡೆಯುತ್ತಿದೆ. ಮೂಲಕ ಇಡೀ ಜಗತ್ತಿನ ಮುಂದೆ ದೇಶದ ಮಾನ ಹರಾಜು ಹಾಕಲಾಗಿದೆ ಎಂದು ಆರೋಪಿಸಿದರು ಜನರ ಸಂಕಷ್ಟಕ್ಕೆ ಸ್ಪಂದಿಸದ ಈ ಸರ್ಕಾರಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದು ಕರೆ ನೀಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಶಿವಕುಮಾರ್ ಎಸ್. ಎಂ ಮಾತನಾಡಿದರು.

ಎಲ್ಲಾ ಕುಟುಂಬಗಳಿಗೆ 6 ತಿಂಗಳ ಕಾಲ ಮಾಸಿಕ 7500 ರೂಪಾಯಿ ನೀಡಬೇಕು , ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿಯಂತೆ 6 ತಿಂಗಳ ಕಾಲ ಉಚಿತ ಆಹಾರ ಧಾನ್ಯಗಳನ್ನು ವಿತರಿಸಬೇಕು , ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೆಚ್ಚಿಸಿದ ವೇತನದೊಂದಿಗೆ ವಾರ್ಷಿಕ 200 ದಿನಗಳ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿ ತಹಶಿಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಸಿಪಿಐ(ಎಂ) ತಾಲೂಕು ಸಮಿತಿ ಸದಸ್ಯರಾದ ವಸಂತ ನಡ , ಶೇಖರ್ ಲಾಯಿಲ ಸುಕನ್ಯಾ ಹೆಚ್ , ಸುಜೀತ್ ಉಜಿರೆ , ರೈತ ಮುಖಂಡ ಸೆಲಿಮೋನ್ ಪುದುವೆಟ್ಟು , ಶ್ರಮಶಕ್ತಿ ಸ್ವಸಹಾಯ ಗುಂಪಿನ ಸಂಯೋಜಕ ಸಂಜೀವ ಆರ್ , ಮಹಿಳಾ ಮುಖಂಡರಾದ ಕುಸುಮ ಮಾಚಾರು, ಸುಧಾ ಕೆ ರಾವ್ ಅತ್ತಾಜೆ ಮೊದಲಾದವರು ವಹಿಸಿದ್ದರು.