ಕಸ್ತೂರಿರಂಗನ್ ವರದಿ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ

ಕಸ್ತೂರಿರಂಗನ್ ವರದಿ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ

GK   ¦    Nov 19, 2020 03:54:31 PM (IST)
ಕಸ್ತೂರಿರಂಗನ್ ವರದಿ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ

ಸುಳ್ಯ: ಸುಳ್ಯ ತಾಲೂಕು ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿ ವಿರುದ್ಧ ಸುಳ್ಯ ತಾಲೂಕಿನ ಬಾಧಿತ ಗ್ರಾಮಗಳ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನಾ ಸಭೆ ಸುಳ್ಯ ತಾಲೂಕು ಕಚೇರಿ ಎದುರು ನ.27 ರಂದು ನಡೆಯಲಿದೆ ಎಂದು ವೇದಿಕೆಯ ಸುಳ್ಯ ತಾಲೂಕು ಸಂಚಾಲಕ ಭಾನುಪ್ರಕಾಶ್ ಪೆರುಮುಂಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಸ್ತೂರಿ ರಂಗನ್ ಸಮಿತಿಯು ನೀಡಿದ ವರದಿಯಿಂದ ಪಶ್ಚಿಮ ಘಟ್ಟ ತಪ್ಪಲಿನ ಗ್ರಾಮಗಳ ಜನತೆ ಪ್ರತಿದಿನ ಆತಂಕದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಸ್ತೂರಿ ರಂಗನ್  ವರದಿ ಅನುಷ್ಠಾನ ಬೇಡ ಎಂದು ಈ ಹಿಂದೆ ಗ್ರಾಮಗಳಲ್ಲಿ ನಡೆದ ವಿಶೇಷ ಗ್ರಾಮ ಸಭೆಯ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಎಲ್ಲಾ ಪಂಚಾಯತಿಗಳಿಗೆ ಒತ್ತಾಯಿಸಲಾಗಿದೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ ವರ್ಗದವರು ಯಾವುದೇ ಮಾಹಿತಿ ನೀಡದ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನ ಬಾಧಿತ ಗ್ರಾಮಗಳ ಗ್ರಾಮಸ್ಥರಿಂದ ನ.27ರಂದು ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಪ್ರತಿಭಟನಾ ಸಭೆಯ ಅಂಗವಾಗಿ ನ.21ರಂದು ಗ್ರಾಮ-ಗ್ರಾಮಗಳಲ್ಲಿ ಜಾಗೃತಿ ಜಾಥಾ ನಡೆಯಲಿದೆ. ಇದೇ ವೇಳೆ ಪ್ರತಿಭಟನಾ ಸಭೆಯ ಕರಪತ್ರ ವಿತರಣೆ ನಡೆಯಲಿದೆ ಎಂದರು.

ಜಿಲ್ಲಾ ಸಮಿತಿ ಸದಸ್ಯ ಜಯರಾಮ ಕಟ್ಟೆಮನೆ ಮಾತನಾಡಿ, ಸುಳ್ಯ, ಪುತ್ತೂರು, ಬೆಳ್ತಂಗಡಿ ಈ ಮೂರು ತಾಲೂಕಿನ 48 ಗ್ರಾಮಗಳು ಕಸ್ತೂರಿರಂಗನ್ ವರದಿಯ ಬಾಧಿತ ಗ್ರಾಮಗಳಾಗಿವೆ. ಅದರಲ್ಲಿ ಸುಳ್ಯ ತಾಲೂಕಿನಲ್ಲಿ 11 ಗ್ರಾಮಗಳು ಸೇರ್ಪಡೆಯಾಗಿದ್ದು, ಇದರ ಜತೆಗೆ ನೆರೆಯ ಕೊಡಗಿನ  ಸಂಪಾಜೆ ಸೇರಿದಂತೆ 12 ಗ್ರಾಮಗಳು ಸೇರ್ಪಡೆಗೊಂಡಿದೆ. ಇದರಿಂದ ರೈತರಿಗೆ ಆಗುವ ತೊಂದರೆಗಳ ಬಗ್ಗೆ ಸಾಧಕ-ಭಾದಕಗಳ ಬಗ್ಗೆ ಚರ್ಚಿಸಿ ಹೋರಾಟಕ್ಕೆ ಸಜ್ಜಾಗಿದ್ದೇವೆ. ಇದಕ್ಕೆ ಪ್ರತಿಯೊಬ್ಬ ರೈತವರ್ಗ, ರಾಜಕೀಯ ನೇತಾರರು, ಸ್ಥಳೀಯ ಮುಖಂಡರ ಕೈಜೋಡಿಸಬೇಕಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಚಾರ ಜಾಥದ ಸಂಚಾಲಕ ಅನಿಲ್ ಬಳ್ಳಡ್ಕ, ಮಡಿಕೇರಿ ತಾಲೂಕು ಸಮಿತಿ ಸಂಚಾಲಕ ಬನ್ನೂರುಪಟ್ಟೆ ಪ್ರದೀಪ್,ಜಿಲ್ಲಾ ಸಮಿತಿ ಸದಸ್ಯ ಭರತ ಕನ್ನಡ್ಕ ಇದ್ದರು.