ಮಾದಕ ವಸ್ತು ಗಾಂಜಾ ಸಾಗಾಟ: ನಾಲ್ವರ ಬಂಧನ

ಮಾದಕ ವಸ್ತು ಗಾಂಜಾ ಸಾಗಾಟ: ನಾಲ್ವರ ಬಂಧನ

Nov 25, 2015 11:38:06 AM (IST)

ಬಂಟ್ವಾಳ: ರಿಕ್ಷಾವೊಂದರಲ್ಲಿ  ಮಾದಕ ವಸ್ತು ಗಾಂಜಾವನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಪೂಂಜಾಲಕಟ್ಟೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಗಾಂಜಾ ಹಾಗೂ ರಿಕ್ಷಾವನ್ನು ವಶಪಡಿಸಿದ್ದಾರೆ.

ಬಂಧಿತರನ್ನು ಉಳ್ಳಾಲ ದರ್ಗಾ ಅಬ್ದುಲ್ ಸಮಾದ್(22), ಉಳ್ಳಾಲ ಧರ್ಮನಗರ ನಿವಾಸಿ ಅಬ್ದುಲ್ ಸಫ್ವಾನ್(19), ಉಳ್ಳಾಲ ಸುಭಾಷ್ ನಗರ ನಿವಾಸಿ ಮಹಮ್ಮದ್ ಸಾದಿಕ್(47) ಮತ್ತು ಮಂಜನಾಡಿ ನಿವಾಸಿ ಮಹಮ್ಮದ್ ಸಿರಾಜ್(34) ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ ಕಡೆಯಿಂದ ಗಾಂಜಾ ಸಾಗಾಟ ನಡೆಸುತ್ತಿರುವ ಖಚಿತ ವರ್ತಮಾನದ ಮೇರೆಗೆ ಪೂಂಜಾಲಕಟ್ಟೆ ಠಾಣಾಧಿಕಾರಿ ಲತೇಶ್ ಕುಮಾರ್ ಮತ್ತು ಸಿಬ್ಬಂದಿಗಳು ಪುಂಜಾಲಕಟ್ಟೆಯಲ್ಲಿ ಕಾಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ತಪಾಸಣೆ ವೇಳೆ ಗಾಂಜಾ ಸಾಗಾಟ ನಡೆಸುತ್ತಿದ್ದ ಆರೋಪಿಗಳು ಪೊಲೀಸರನ್ನು ಕಂಡು ಆಟೋ ರಿಕ್ಷಾವನ್ನು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಬೆನ್ನಟ್ಟಿ ರಿಕ್ಷಾವನ್ನು ಅಡ್ಡಗಟ್ಟಿದಾಗ ರಿಕ್ಷಾದ ಹಿಂಬದಿ ಸೀಟಿನ ಅಡಿಭಾಗದಲ್ಲಿ 300 ಗ್ರಾಮ ಗಾಂಜಾ ಪತ್ತೆಯಾಗಿದ್ದು, ಅವುಗಳ ಮೌಲ್ಯ 6000 ಎಂದು ಅಂದಾಜಿಸಲಾಗಿದೆ.  ಈ ಗಾಂಜಾವನ್ನು ಗೇರುಕಟ್ಟೆಯ  ಫಾರೂಕ್  ಎಂಬಾತನಿಂದ ಪಡೆದುಕೊಂಡಿರುವುದಾಗಿ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರ ಆಧಾರದಲ್ಲಿ ಪೊಲೀಸು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.