ಸಾಲಮನ್ನಾ ಯೋಜನೆ: ಗ್ರೀನ್ ಲಿಸ್ಟ್‍ನಲ್ಲಿ ಸೇರ್ಪಡೆಯಾದವರ ಖಾತೆಗೆ ಶೀಘ್ರ ಹಣ ಜಮೆ

ಸಾಲಮನ್ನಾ ಯೋಜನೆ: ಗ್ರೀನ್ ಲಿಸ್ಟ್‍ನಲ್ಲಿ ಸೇರ್ಪಡೆಯಾದವರ ಖಾತೆಗೆ ಶೀಘ್ರ ಹಣ ಜಮೆ

GK   ¦    Nov 07, 2019 06:43:04 PM (IST)
ಸಾಲಮನ್ನಾ ಯೋಜನೆ: ಗ್ರೀನ್ ಲಿಸ್ಟ್‍ನಲ್ಲಿ ಸೇರ್ಪಡೆಯಾದವರ ಖಾತೆಗೆ ಶೀಘ್ರ ಹಣ ಜಮೆ

ಸುಳ್ಯ: ರಾಜ್ಯ ಸರ್ಕಾರ ಘೋಷಿಸಿದ ಸಾಲಮನ್ನಾ ಯೋಜನೆಯಲ್ಲಿ ರೈತರ ಚಾಲ್ತಿ ಖಾತೆ ನಂಬರ್ ನಮೂದಿಸದ ಕಾರಣ ಹಣ ಹಿಂದಕ್ಕೆ ಹೋಗಿರುವ ಎಲ್ಲಾ ರೈತರ ಖಾತೆ ನಂಬರ್‍ನ್ನು ನಮೂದಿಸಿ ಕೆಲವೇ ದಿನದಲ್ಲಿ ಹಣ ರೈತರ ಖಾತೆಗೆ  ಜಮೆ ಆಗಲು ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸುಳ್ಯ ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ, ಸಾಲ ಮನ್ನಾ ಹಣ ರೈತರ ಖಾತೆಗೆ ಜಮೆ ಆಗದೆ ಅನ್ಯಾಯ ಆಗಿದೆ ಎಂದು ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಭೆಗೆ ಆಗಮಿಸಿ ಮಾಹಿತಿ ನೀಡಿದ ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಮಂಜುನಾಥ್ ಸಿಂಗ್, ಸುಳ್ಯ ತಾಲೂಕಿಲ್ಲಿ ಸಾಲ ಮನ್ನಾಕ್ಕೆ ಒಟ್ಟು 14,114 ಮಂದಿ ರೈತರ 118.11 ಕೋಟಿ ರೂ ಬೇಡಿಕೆ ಇತ್ತು. ಇದರಲ್ಲಿ 10,856 ಮಂದಿಗೆ 83.72 ಕೋಟಿ ಬಿಡುಗಡೆ ಆಗಿದೆ. ಇದರಲ್ಲಿ ಖಾತೆ ಸಂಖ್ಯೆ ನಮೂದಿಸದ ಕಾರಣ 7,462 ರೈತರಿಗೆ 58.22 ಕೋಟಿ ಜಮೆ ಆಗಲು ಬಾಕಿ ಇತ್ತು. ಕಳೆದ ವಾರ ಮೂರು ದಿನಗಳ ಕಾಲ ಅಪ್‍ಲೋಡ್ ಮಾಡಲು ಅವಕಾಶ ನೀಡಿದಾಗ 2,953 ರೈತರ ಖಾತೆ ಸಂಖ್ಯೆ ಅಪಲೋಡ್ ಮಾಡಲಾಗಿದೆ. ಸೋಮವಾರದಿಂದ ಮತ್ತೆ ಅಪ್‍ಲೋಡ್ ಮಾಡಲು ಅವಕಾಶ ನೀಡಲಿದ್ದು 4,509 ರೈತರ ಖಾತೆ ಸಂಖ್ಯೆ ಅಪ್‍ಲೋಡ್ ಮಾಡಲಾಗುವುದು ಎಂದು ಹೇಳಿದರು.

ಒಟ್ಟು 7,462 ರೈತರಿಗೆ 58.22 ಕೋಟಿ ಜಮೆ ಆಗಲಿದೆ ಎಂದು ವಿವರಿಸಿದರು. ವಿವಿಧ ಕಾರಣಗಳಿಂದ 3,148 ರೈತರ ಹೆಸರು ಗ್ರೀನ್ ಲಿಸ್ಟ್‍ಗೆ ಸೇರ್ಪಡೆ ಆಗಲಿಲ್ಲ. ಇವರ ಖಾತೆಗೆ ಹಣ ಜಮೆ ಆಗಲು ಇರುವ ತಾಂತ್ರಿಕ ಕಾರಣಗಳನ್ನು ಸರಿಪಡಿಸಲು ಮುಂದೆ ಅವಕಾಶ ಇದೆ ಎಂದು ಅವರು ವಿವರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 94,867 ರೈತರಿಗೆ 982 ಕೋಟಿ ಬೇಡಿಕೆ ಇದೆ. ಇದರಲ್ಲಿ 350.11 ಕೋಟಿ ಬಿಡುಗಡೆ ಆಗಿದೆ ಎಂದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ರಾಧಾಕೃಷ್ಣ ಬೊಳ್ಳೂರು ಸಾಲ ಮನ್ನಾ ಹಣ ರೈತರ ಖಾತೆಗೆ ಬರಲು ವಿಳಂಬ ಆಗಲು ಸಹಕಾರ ಇಲಾಖೆಯೇ ಕಾರಣ ಎಂದು ದೂರಿದರು. ಎಲ್ಲವೂ ಸರಿ ಇದ್ದ ರೈತರಿಗೂ ಹಣ ಜಮೆ ಆಗದೆ ಅನ್ಯಾಯ ಆಗಿದೆ ಎಂದು ಸದಸ್ಯ ಅಬ್ದುಲ್ ಗಫೂರ್ ಹೇಳಿದರು. ಸಾಲ ಮನ್ನಾ ಹಣ ಬರಲು ಬಾಕಿ ಇದ್ದರೂ ರೈತರ ಸಾಲವನ್ನು ಪೂರ್ತಿಯಾಗಿ ಸಹಕಾರಿ ಸಂಘಗಳು ವಸೂಲಿ ಮಾಡಿದ್ದು ಯಾಕೆ ಎಂದು ಸದಸ್ಯ ಅಶೋಕ್ ನೆಕ್ರಾಜೆ ಪ್ರಶ್ನಿಸಿದರು.

ಇಲಾಖೆಯಿಂದ ಅಂತಹಾ ಯಾವುದೇ ಸೂಚನೆಯನ್ನೂ ಸಹಕಾರಿ ಸಂಘಗಳಿಗೆ ನೀಡಿಲ್ಲ ಎಂದು ಅಧಿಕಾರಿಗಳು ಹೇಳಿದರು. ಈ ತಿಂಗಳ ಕೊನೆಯ ಒಳಗಾಗಿ ಸಾಲಮನ್ನಾ ಅರ್ಹರಾದ ಎಲ್ಲಾ ರೈತರಿಗೂ ದೊರಕಿಸಲು ಕ್ರಮ ಕೈಗೊಳ್ಳಿ ಎಂದು ಅಧ್ಯಕ್ಷರು ಸೂಚಿಸಿದರು.