ಮಹಿಳೆಯರ ರಕ್ಷಣೆ ಸಮಾಜದ ಜವಾಬ್ದಾರಿ: ನ್ಯಾಯಾಧೀಶ ಮಹಮ್ಮದ್ ಇಮ್ತಿಯಾಜ್

ಮಹಿಳೆಯರ ರಕ್ಷಣೆ ಸಮಾಜದ ಜವಾಬ್ದಾರಿ: ನ್ಯಾಯಾಧೀಶ ಮಹಮ್ಮದ್ ಇಮ್ತಿಯಾಜ್

MV   ¦    Mar 09, 2020 07:20:56 PM (IST)
ಮಹಿಳೆಯರ ರಕ್ಷಣೆ ಸಮಾಜದ ಜವಾಬ್ದಾರಿ: ನ್ಯಾಯಾಧೀಶ ಮಹಮ್ಮದ್ ಇಮ್ತಿಯಾಜ್

ಬಂಟ್ವಾಳ: ಮಹಿಳೆಯರ ರಕ್ಷಣೆ ಸಮಾಜದ ಜವಾಬ್ದಾರಿಯಾಗಿದ್ದು, ಮನೆ, ಅವರು ಕೆಲಸ ಮಾಡುವ ಜಾಗಗಳಲ್ಲಿ ಶೋಷಣೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಅವರ ಸುರಕ್ಷಣೆಗಾಗಿ ಕಾನೂನುಗಳ ನೆರವು ಕೂಡ ಇದ್ದು, ಇದರ ಮೂಲಕ ಶೋಷಣೆಗಳಿಗೆ ಮಹಿಳೆಯರು ನ್ಯಾಯ ಪಡೆಯಬಹುದಾಗಿದೆ ಎಂದು ಬಂಟ್ವಾಳ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ಇಮ್ತಿಯಾಜ್ ಅಹಮ್ಮದ್ ಹೇಳಿದರು.

ಅವರು ಸೋಮವಾರ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅಧಿವಕ್ತಾ ಪರಿಷತ್ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿ ವಿದ್ಯಾಲತಾ ಅವರು ಮಹಿಳಾ ಹಕ್ಕುಗಳ ಕುರಿತು ಉಪನ್ಯಾಸ ನೀಡಿ, ನಮ್ಮನ್ನು ಮತ್ತೊಬ್ಬರು ರಕ್ಷಣೆ ಮಾಡುತ್ತಾರೆ ಎಂಬ ಮನೋಭಾವವನ್ನು ಬಿಟ್ಟು ನಮ್ಮ ಹಕ್ಕುಗಳ ಕುರಿತು ಅರಿತುಕೊಂಡಾಗ ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯವಿದೆ ಎಂದರು.

ಮಹಿಳಾ ಸಬಲೀಕರಣದ ಕುರಿತು ಶೋಭಲತಾ ಸುವರ್ಣ ಉಪನ್ಯಾಸ ನೀಡಿ, ಪ್ರಸ್ತುತ ಮಹಿಳೆಯರು ಸಮಾಜದಲ್ಲಿ ಎಲ್ಲಾ ಸ್ಥರಗಳಲ್ಲೂ ಮುಂದುವರಿದಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಇನ್ನಷ್ಟು ಸಾಧನೆ ಮಾಡಬೇಕಿದೆ. ಆರ್ಥಿಕ ಸ್ವಾವಲಂಬಿಯಾದರೆ ಮಹಿಳಾ ಸಬಲೀಕರಣ ಸಾಧ್ಯ ಎಂದರು.

ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್‌ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ, ಸಿವಿಲ್ ನ್ಯಾಯಾಧೀಶೆ ರಮ್ಯಾ ಎಚ್.ಆರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಜಿ.ತಿಮ್ಮಾಪುರ್, ಜಿಲ್ಲಾ ಕಾನೂನು ಸೇವೆಗಳ ಸಮಿತಿ ಸದಸ್ಯ ಕೆ.ರಮೇಶ್ ಉಪಾಧ್ಯಾಯ, ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ, ವಕೀಲರ ಸಂಘದ ಜತೆ ಕಾರ್ಯದರ್ಶಿ ವಿನೋದ ಎ.ಎಸ್, ಅಧಿವಕ್ತಾ ಪರಿಷತ್ ಉಪಾಧ್ಯಕ್ಷೆ ಉಮಾ ಎನ್.ಸೋಮಯಾಜಿ ಭಾಗವಹಿಸಿದ್ದರು.

ಬಂಟ್ವಾಳ ಅಧಿವಕ್ತಾ ಪರಿಷತ್ ಗೌರವಾಧ್ಯಕ್ಷ ರಾಜಾರಾಮ್ ನಾಯಕ್ ಪ್ರಸ್ತಾವನೆಗೈದರು. ನ್ಯಾಯವಾದಿಗಳಾದ ಶೈಲಜಾ ರಾಜೇಶ್ ಸ್ವಾಗತಿಸಿ, ಅಕ್ಷತಾ ವಂದಿಸಿದರು. ದಕ್ಷಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು.