ಮಡಿಕೇರಿ: ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದಗೌಡ ಮತ್ತು ಡಾಟಿ ದಂಪತಿಯ ಪುತ್ರ ಕಾರ್ತಿಕ್ ಗೌಡ, ಕುಶಾಲನಗರದ ಉದ್ಯಮಿ ಕೂಡಕಂಡಿ ನಾಣಯ್ಯ ಮತ್ತು ಸುಧಾ ಅವರ ಪುತ್ರಿ ರಾಜಶ್ರೀ ಹೊಸಬಾಳಿಗೆ ಕಾಲಿರಿಸಿದ್ದಾರೆ. ಈ ಶುಭ ಕ್ಷಣಗಳಿಗೆ ಹಲವು ಗಣ್ಯರು ಸಾಕ್ಷಿಯಾದರು.
ಸಚಿವ ಡಿ.ವಿ.ಸದಾನಂದ ಗೌಡ ಮತ್ತು ಕೊಡಗಿನವರೇ ಆದ ಗುಡ್ಡೆಮನೆ ಮನೆತನದ ಡಾಟಿ ಅವರ ಏಕೈಕ ಪುತ್ರ ಕಾರ್ತಿಕ್ ಗೌಡ ಮತ್ತು ಕುಶಾಲನಗರದ ಉದ್ಯಮಿ ಕೂಡಕಂಡಿ ನಾಣಯ್ಯ ಮತ್ತು ಸುಧಾ ಅವರ ಪುತ್ರಿ ರಾಜಶ್ರೀಯನ್ನು ವರಿಸಿದ್ದಾರೆ.
ವಿವಾಹ ಸಮಾರಂಭಕ್ಕೆ ಕೇಂದ್ರ ಸಚಿವರಾದ ಮೇನಕ ಗಾಂಧಿ, ಸೇರಿದಂತೆ ಕರ್ನಾಟಕದ ರಾಜ್ಯಪಾಲ ವಜುಬಾಯಿ ವಾಲಾ, ಕೇಂದ್ರ ಮತ್ತು ರಾಜ್ಯ ದ ಬಿಜೆಪಿ ಮುಖಂಡರುಗಳು, ರಾಜ್ಯ ಸರಕಾರದ ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್, ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸಿ.ಟಿ.ರವಿ, ಸುಬ್ರಮಣ್ಯ ನಾಯ್ಡು, ಶ್ರೀರಾಮುಲು, ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಷಿ, ಜಿಲ್ಲೆಯ ಶಾಸಕದ್ವಯರಾದ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಜಿಲ್ಲೆಯ ಮಾಜಿ ಶಾಸಕರುಗಳು, ಜಿಲ್ಲಾಧಿಕಾರಿ ಮೀರ್ ಅನಿಸ್ ಅಹಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅನೇಕ ಮಾಜಿ ಸಚಿವರುಗಳು ಅಲ್ಲದೆ, ವಿವಿಧ ರಾಜಕೀಯ ಪಕ್ಷದ ಮುಖಂಡರು ಆಗಮಿಸಿ ನವ ದಂಪತಿಗಳಿಗೆ ಶುಭಹಾರೈಸಿದರು.
ಬೆಂಗಳೂರಿನ ಖ್ಯಾತ ಶಾಮಿಯಾನ ಮತ್ತು ಡೆಕೋರೇಟರ್ ಸಂಸ್ಥೆಯೊಂದು ಅದ್ದೂರಿಯ ವಿದ್ಯುತ್ ಅಲಂಕಾರ, ಶಾಮಿಯಾನ, ಪುಷ್ಪಾಲಂಕಾರ, ಕಾರಂಜಿ, ಸಂಗೀತದ ವ್ಯವಸ್ಥೆ ಮಾಡಲಾಗಿತ್ತು. ಊಟೋಪಚಾರದ ಹೊಣೆಯನ್ನು ವಧುವಿನ ಕಡೆಯಿಂದ ಉದ್ಯಮಿ ನಾಣಯ್ಯ ಅವರ ಹೋಟೆಲ್ ವಹಿಸಿಕೊಂಡಿತ್ತು. ಸಹಕಾರ ಭವನದ ಮೈದಾನದಲ್ಲಿ ಸುಮಾರು 500 ವಾಹನಗಳು ಮತ್ತು ಜಾತ್ರಾ ಮೈದಾನದಲ್ಲಿ 2 ಸಾವಿರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು.
ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸಿಡಬ್ಲ್ಯು.ಪೂವಯ್ಯ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು 150 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಭದ್ರತೆಯ ಉಸ್ತವಾರಿ ಹೊತ್ತಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತು ಕಲ್ಪಿಸಲಾಗಿತು, ವಧುವಿನ ಮನೆಯಿಂದ ಗೌಡರ ಪುತ್ರನಿಗೆ ನೂತನ ಆಡಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.