ಕಂಪಲಾಪುರ: ಕಂಪಲಾಪುರ ಗ್ರಾಮದಲ್ಲಿ ಕಳೆದ 2005-06ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿಯಿಂದ ನಿರ್ಮಿಸಲಾದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವು ಸುಸಜ್ಜಿತ ಹಾಗೂ ಎಲ್ಲಾ ಉತ್ತಮ ಸೌಲಭ್ಯ ಹೊಂದಿದ್ದು ಹೊರರೋಗಿಗಳಿಗೆ ಇಲ್ಲಿನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮ ಚಿಕಿತ್ಸೆ ಹಾಗೂ ಹಲವು ಇಲಾಖಾ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು ತಾಲೂಕಿನಲ್ಲಿಯೇ ಪ್ರಸಿದ್ಧಿ ಪಡೆದಿದ್ದ ಈ ಆರೋಗ್ಯ ಕೇಂದ್ರವು ಇಂದು ವೈದ್ಯಾಧಿಕಾರಿಗಳಿಲ್ಲದೆ ಅನಾಥವಾಗಿದೆ.
ಕಳೆದ 17 ವರ್ಷಗಳಿಂದ ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಸ್.ಕೆ.ರವಿಕುಮಾರ್ ಎರಡು ತಿಂಗಳ ಹಿಂದೆ ವರ್ಗಾವಣೆಗೊಂಡಿದ್ದು ಈ ಸ್ಥಾನಕ್ಕೆ ಡಾ.ನಾಗಲಕ್ಷ್ಮಿ ಎಂಬುವರನ್ನು ನೇಮಕಗೊಳಿಸಲಾಗಿತ್ತು. ಆದರೆ ಡಾ. ನಾಗಲಕ್ಷ್ಮಿ ಕೇವಲ 15 ದಿನಗಳ ಕಾಲ ಕಾರ್ಯನಿರ್ವಹಿಸಿದ ನಂತರ ಜಿಲ್ಲಾ ಕಾರ್ಯಕ್ರಮಾಧಿಕಾರಿಯಾಗಿ ಮುಂಬಡ್ತಿ ಹೊಂದಿ ವರ್ಗಾವಣೆಗೊಂಡರು. ಅಂದಿನಿಂದ ಇಂದಿನವರೆಗೂ ಪ್ರಾಥಮಿಕ ಆರೋಗ್ಯ ಕೇಂದ್ರವು ವೈದ್ಯಾಧಿಕಾರಿಗಳಿಲ್ಲದೆ ರೋಗಿಗಳು ಅಲೆದಾಡುವ ಪರಿಸ್ಥಿತಿ ಎದುರಾಗಿದೆ.
ಈ ಪ್ರಾಥಮಿಕ ಆರೋಗ್ಯ ಕೇಂದ್ರವು ಬಿ.ಎಂ.ಮುಖ್ಯರಸ್ತೆಯ ರಾಜ್ಯ ಹೆದ್ದಾರಿಯಲ್ಲಿದ್ದು ದಿನದ 24 ಗಂಟೆ ಹಾಗೂ ವಾರದ 7 ದಿನಗಳು ಕಾರ್ಯ ನಿರ್ವಹಿಸುವ ಆರೋಗ್ಯ ಕೇಂದ್ರವಾಗಿದ್ದು ವೈದ್ಯಾಧಿಕಾರಿಗಳಿಲ್ಲದೆ ಯಾವುದೇ ಅವಘಡ ಸಂಭವಿಸಿದರೂ ಕೇವಲ ಪ್ರಥಮ ಚಿಕಿತ್ಸೆಯನ್ನು ಇಲ್ಲಿನ ಕಿರಿಯ ಆರೋಗ್ಯ ಸಹಾಯಕಿಯರು ನೀಡಬಹುದಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ತಾಲ್ಲೂಕು ಆರೋಗ್ಯ ಕೇಂದ್ರಕ್ಕೆ ತೆರಳುವಂತಾಗಿದೆ.
ಈ ಆರೋಗ್ಯ ಕೇಂದ್ರವು ಮಹಿಳೆ, ಬಾಣಂತಿ, ಗರ್ಭಿಣಿಯರಿಗೆ ಉತ್ತಮ ಚಿಕಿತ್ಸೆ ನೀಡುವ ಕೇಂದ್ರವಾಗಿದ್ದು ಇದರ ವ್ಯಾಪ್ತಿಗೆ 17 ಗ್ರಾಮ, 5 ಉಪಕೇಂದ್ರ ಸೇರಿದ್ದು, 4 ಕೇಂದ್ರಗಳಲ್ಲಿ ಕಿರಿಯ ಮಹಿಳಾ ಸಹಾಯಕಿಯರಿದ್ದು ಉಳಿದ 1 ಉಪ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ಹುದ್ದೆ ಖಾಲಿ ಇದೆ. ಈ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 17.500 ಜನಸಂಖ್ಯೆ ಹೊಂದಿದ್ದು ವೈದ್ಯಾಧಿಕಾರಿಗಳಿಲ್ಲದೆ ರೋಗಿಗಳು ಪ್ರತಿನಿತ್ಯ ಅಲೆದಾಡುವಂತಾಗಿದ್ದು ವೈದ್ಯರ ಆಗಮನಕ್ಕಾಗಿ ಎದುರು ನೋಡುವಂತಾಗಿದೆ.
ಈ ಕುರಿತು ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟ ತಾಲೂಕು ಹಾಗೂ ಜಿಲ್ಲಾ ಅರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರೋಗಿಗಳ ಆರೋಗ್ಯದ ಜೊತೆ ಚೆಲ್ಲಾಟವಾಡದೆ ಸೂಕ್ತ ಕ್ರಮ ಕೈಗೊಂಡು ವೈದ್ಯಾಧಿಕಾರಿಗಳನ್ನು ನೇಮಕಗೊಳಿಸಿ ರೋಗಿಗಳ ಆರೋಗ್ಯ ಕಾಪಾಡಬೇಕಿದ್ದು, ಶೀಘ್ರದಲ್ಲಿ ಕಂಪಲಾಪುರ ಆರೋಗ್ಯ ಕೇಂದ್ರದಿಂದ ವರ್ಗಾವಣೆಗೊಂಡ ವೈದ್ಯಾಧಿಕಾರಿಗಳ ಸ್ಥಾನಕ್ಕೆ ವೈದ್ಯಾಧಿಕಾರಿಗಳನ್ನು ನೇಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.