ಹೆಡಿಯಾಲ: ಶಿಥಿಲಗೊಂಡ ಕಟ್ಟಡ.. ಕಳೆದೊಂದುವರೆ ದಶಕಗಳಿಂದ ಕುರ್ಚಿಗಂಟಿ ಕುಳಿತಿರುವ ಗ್ರಾಮಲೆಕ್ಕಿಗರು.. ಸಾಲುಗಟ್ಟಿ ನಿಂತ ಸಾರ್ವಜನಿಕರು.. ಇದೆಲ್ಲವೂ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ನಾಡಕಚೇರಿಯ ಮುಂದೆ ದಿನನಿತ್ಯ ಕಂಡು ಬರುವ ಸಾಮಾನ್ಯ ದೃಶ್ಯಗಳು.
200ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದಿಂದ ರೈತರು, ವಿಧವೆಯರು, ವೃದ್ದರು ಹಾಗೂ ಅಂಗವಿಕಲರು ಹುಲ್ಲಹಳ್ಳಿ ನಾಡ ಕಚೇರಿಗೆ ಹಲವು ಕಾರಣಗಳಿಗೆ ಬರುತ್ತಾರೆ. ಆದರೆ ನಾಡಕಚೇರಿಯೇ ಹಲವು ಸಮಸ್ಯೆಯಿಂದ ಬಳಲುತ್ತಿದ್ದು, ಇನ್ನು ಜನರ ಸಮಸ್ಯೆ ಹೇಗೆ ಪರಿಹರಿಸುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಏಕೆಂದರೆ ಕುಡಿಯಲು ನೀರಿಲ್ಲದೆ ಬಳಸುವ ಶೌಚಾಲಯವಿಲ್ಲದೆ, ನಾಡ ಕಚೇರಿಯಲ್ಲಿ ಗ್ರಾಮ ಲೆಕ್ಕಿಗರ ಕೊರತೆಯ ಸಮಸ್ಯೆ ಒಂದು ಕಡೆಯಾದರೆ ಇರುವ ಅಲ್ಪ ಮಟ್ಟದ ಗ್ರಾಮಲೆಕ್ಕಿಗರು 15 ವರ್ಷಗಳಿಂದಲೂ ಒಂದೇ ಕಡೆ ಜಡ್ಡುಗಟ್ಟಿ ತುಕ್ಕು ಹಿಡಿದಿರುವ ಕಬ್ಬಿಣದಂತಾಗಿದ್ದಾರೆ. ವೃದ್ಧರು, ವಿಧವೆಯರು, ಅಂಗವಿಕಲರನ್ನು ಮಧ್ಯವರ್ತಿ ದಲ್ಲಾಳಿಗಳು ಸುಲಿಗೆ ಮಾಡುತ್ತಿದ್ದಾರೆ. ಕಂದಾಯ ಸಚಿವರ ಸ್ವಕ್ಷೇತ್ರದ ತಾಲೂಕು ಕೇಂದ್ರದಲ್ಲಿ ಕೇವಲ 15 ಕಿ.ಮೀ ದೂರವಿರುವ ಹುಲ್ಲಹಳ್ಳಿ ನಾಡಕಚೇರಿ ಅಟಲ್ಜಿ ಜನ ಸ್ನೇಹಿ ಕೇಂದ್ರಕ್ಕೆ ಈ ಸ್ಥಿತಿಯಾದರೆ ಉಳಿದ ನಾಡಕಚೇರಿಗಳ ಸ್ಥಿತಿ ಹೇಗಿರಬಹುದು?
ನಂಜನಗೂಡು ತಾಲೂಕಿನ ಕಸಬಾ, ಚಿಕ್ಕಯ್ಯನ ಛತ್ರ, ಬಿಳಿಗೆರೆ, ಕೌಲಂದೆ, ಹುಲ್ಲಹಳ್ಳಿ, ಎಂಬ ಐದು ಹೋಬಳಿಗಳಿವೆ. ಇವುಗಳಲ್ಲಿ ಹುಲ್ಲಹಳ್ಳಿ ನಾಡ ಕಚೇರಿ ಅತಿ ದೊಡ್ಡದಾಗಿದೆ. ಇಲ್ಲಿ ಒಟ್ಟು 74,00,414 ಭೌಗೋಳಿಕ ವಿಸ್ತೀರ್ಣವಿದೆ. 61 ಕಂದಾಯ ಗ್ರಾಮಗಳು, 48 ಚಿರಾಗ್ ಗ್ರಾಮಗಳು, 13 ಬೇಚಿರಾಗ್ ಗ್ರಾಮಗಳು, 28 ದಾಖಲೆ ಗ್ರಾಮಗಳು, 76 ಜನವಸತಿ ಗ್ರಾಮಗಳನ್ನು ಹೊಂದಿ ಇಲ್ಲಿ 34,73,136 ಖುಷ್ಕಿ ಭೂಮಿ, 10,37,120 ತರಿ ಭೂಮಿಯನ್ನು ಹೊಂದಿರುತ್ತಾರೆ. ಒಟ್ಟು 23 ಗ್ರಾಮ ಲೆಕ್ಕಿಗರ ವೃತ್ತವನ್ನು ಹೊಂದಿದ್ದು ಸರ್ಕಾರಿ ಆದೇಶದ ಪ್ರಕಾರ ಕಡ್ಡಾಯವಾಗಿ 23 ಜನ ಗ್ರಾಮ ಲೆಕ್ಕಿಗರು ಕಾರ್ಯ ನಿರ್ವಹಿಸುವ ಬದಲಾಗಿ ಕೇವಲ 6 ಜನ ಗ್ರಾಮ ಲೆಕ್ಕಿಗರು 15 ವರ್ಷಗಳಿಂದಲೂ ಒಂದೇ ಕಡೆ ಸೇವೆ ಮಾಡಿ ತುಕ್ಕು ಹಿಡಿದ ಕಬ್ಬಿಣಗಳಂತಾಗಿ ಮಧ್ಯವರ್ತಿ ದಲ್ಲಾಳಿಗಳ ಹಾವಳಿಯನ್ನು ಹೆಚ್ಚಿಸಿಕೊಂಡು ಗ್ರಾಮೀಣ ಭಾಗದಿಂದ ಬರುವ ವೃದ್ಧರು ಅಂಗವಿಕಲರು, ವಿಧವೆಯರಿಗೆ ಮಂಜೂರಾತಿ ಪತ್ರವನ್ನು ಕೊಡಿಸಿಕೊಡುವ ನೆಪ ಹೇಳಿ 1 ಸಾವಿರ ರೂಗಳಿಗಿಂತಲೂ ಅಧಿಕ ಹಣ ವಸೂಲಿ ಮಾಡುತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಖಾತೆ ಬದಲಾವಣೆಗೆ 20 ರಿಂದ 25 ಸಾವಿರ ರೂ.ಗಳನ್ನು ತೆತ್ತಿರುವ ಎಷ್ಟೋ ಉದಾಹರಣೆಗಳಿವೆ. ಹುಲ್ಲಹಳ್ಳಿ ನಾಡಕಚೇರಿಯಲ್ಲಿ 10 ವರ್ಷಗಳಿಂದಲೂ ಗ್ರಾಮ ಲೆಕ್ಕಿಗನಾಗಿ ಕಾರ್ಯನಿರ್ವಹಿಸುತ್ತಿದ್ದ ಸೋಮಶೇಖರ್ ಎಂಬಾತ ಚನ್ನಪಟ್ಟಣ ಗ್ರಾಮದ ರೈತರಿಗೆ ಬರ ಪರಿಹಾರ ಹಣವನ್ನು ವಂಚಿಸಿ ನಕಲಿ ಸಹಿ ಮಾಡಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದರು ಎಂಬ ವಿಚಾರವಾಗಿ ಇಂದಿನ ಉಪ ವಿಭಾಗಾಧಿಕಾರಿ ಸೈಯಿದ್ ಆಯಿಷಾರವರು ಪರಿಶೀಲನೆ ಮಾಡಿ ಆ ಗ್ರಾಮ ಲೆಕ್ಕಿಗರನ್ನು ಕೆಲವೇ ತಿಂಗಳುಗಳ ಹಿಂದೆ ಅಮಾನತ್ತು ಮಾಡಲಾಗಿತ್ತು.
ಈ ಸಭೆಯಲ್ಲಿ ಹುಲ್ಲಹಳ್ಳಿ ಗ್ರಾಮದ ಅಂಗವಿಕಲ ರೈತರೊಬ್ಬರು ಆರ್ಐ ಉಮಾಮಹೇಶ್ ಎಂಬುವವರು ರೈತರನ್ನು ಹಣದ ಸುಲಿಗೆ ಮಾಡುತ್ತಿದ್ದಾರೆ ಇದಕ್ಕೆ ಪರಿಹಾರ ಕಲ್ಪಿಸಿಕೊಡಿ ಎಂದು ಜಿಲ್ಲಾಧಿಕಾರಿ ಶಿಖಾರವರಿಗೆ ಬಂದ ದೂರಿನ ಮೇರೆಗೆ ಪರಿಶೀಲನೆ ಮಾಡಿ ಆರ್ಐ ಉಮಾಮಹೇಶ್ ಅವರನ್ನು 2 ತಿಂಗಳುಗಳ ಹಿಂದೆ ಅಮಾನತ್ತು ಮಾಡಿದ್ದರು.
ಹುಲ್ಲಹಳ್ಳಿ ನಾಡ ಕಚೇರಿ ಅಧಿಕಾರಿಗಳ ಲಂಚಾವತಾರದಿಂದ ನಲುಗುವುದು ಒಂದು ಕಡೆಯಾದರೆ ಹೊರ ಗ್ರಾಮಗಳಿಂದ ಬರುತ್ತಿರುವ ರೈತರು ವೃದ್ದರು ಅಂಗವಿಕಲರು, ವಿಧವೆಯರು, ಮಹಿಳೆಯರಿಗೆ, ಶೌಚಾಲಯವಿಲ್ಲದೆ, ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಇತ್ತ ಗಮನಹರಿಸುವರೆ ಎಂಬುದನ್ನು ಕಾದುನೋಡಬೇಕಾಗಿದೆ.