ಕುಶಾಲನಗರ: ಕಾವೇರಿ ನದಿ ಸಂರಕ್ಷಣೆಗಾಗಿ ವಿಶೇಷ ಕಾನೂನು ರೂಪಿಸಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದು, ಇದರೊಂದಿಗೆ ನದಿಯ ಸ್ವಚ್ಚತೆ ಕಾಪಾಡಲು ಮುಂದಿನ ಬಜೆಟ್ನಲ್ಲಿ ಅನುದಾನ ಕಲ್ಪಿಸಲು ಚಿಂತನೆ ಹರಿಸಲಾಗುವುದು ಎಂದು ತಿಳಿಸಿದ್ದಾರೆ.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ನಿಯೋಗ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭ ಮಾತನಾಡಿದ ಅವರು, ಪ್ರಕೃತಿ ವಿಕೋಪದೊಂದಿಗೆ ಈ ಬಾರಿ ಮಳೆಯ ಪ್ರಮಾಣ ಕ್ಷೀಣಿಸಿದ್ದು ಜಲಾಶಯಗಳು ಭರ್ತಿಯಾಗದಿರುವುದು ಈ ಮೂಲಕ ನಾಡಿನಲ್ಲಿ ಬರದ ಛಾಯೆ ಮೂಡಿದೆ ಎಂದರು. ನದಿಗಳ ಒತ್ತುವರಿ ತಡೆ, ನದಿ ಸಂರಕ್ಷಣೆಗೆ ಕಾಯ್ದೆ ತರುವ ಮೂಲಕ ಸಂಪೂರ್ಣ ನಿಯಂತ್ರಣ ಸಾಧ್ಯ ಎಂದು ಮುಖ್ಯಮಂತ್ರಿಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಎಂ.ಎ.ಪೊನ್ನಪ್ಪ ಮನವರಿಕೆ ಮಾಡಿದ ಸಂದರ್ಭ ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಚರ್ಚೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ರಾಜ್ಯದಲ್ಲಿ ಅನೇಕ ಕಡೆ ನದಿಗಳ ಉಗಮ ಸ್ಥಾನ, ಹರಿಯುವ ಪ್ರದೇಶ ಮತ್ತು ನದಿ ಸೇರುವ ಸ್ಥಳಗಳ ಬಗ್ಗೆ ಮಾಹಿತಿ ಪಡೆದು ಅಂತರ್ಜಲ ಕುಸಿತದ ಬಗ್ಗೆ ನಿಖರ ಮಾಹಿತಿ ಪಡೆಯುವ ಬಗ್ಗೆ ಈ ಸಂದರ್ಭ ಚರ್ಚೆ ನಡೆಯಿತು.
ಈಗಾಗಲೆ ದೇಶದ 17 ರಾಜ್ಯಗಳಲ್ಲಿ ಕಾಯ್ದೆ ಜಾರಿಯಾಗಿರುವ ಕೇಂದ್ರ ಸರಕಾರದ ರಿವರ್ ಬೋರ್ಡ್ ಆಕ್ಟ್ ಅನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವಂತೆ ನಿಯೋಗದ ಪ್ರಮುಖರಾದ ವೇ.ಬ್ರ. ಡಾ.ಭಾನುಪ್ರಕಾಶ್ ಶರ್ಮಾ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಎಂ.ಎ.ಪೊನ್ನಪ್ಪ ನೇತೃತ್ವದಲ್ಲಿ ತೆರಳಿದ ನಿಯೋಗದಲ್ಲಿ ಸಮಿತಿಯ ಸಂಸ್ಥಾಪಕರಾದ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ, ರಾಜ್ಯ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್, ಕೊಡಗು ಜಿಲ್ಲಾ ಸಂಚಾಲಕರಾದ ರೀನಾ ಪ್ರಕಾಶ್, ನದಿ ಜಾಗೃತಿ ಸಮಿತಿಯ ಪ್ರಮುಖರಾದ ಡಿ.ಆರ್.ಸೋಮಶೇಖರ್, ಕೆ.ಜಿ.ಮನು, ವೈಶಾಖ್, ವಿನೋದ್, ಪ್ರವೀಣ್, ರಘು ಹೆಬ್ಬಾಲೆ ಇದ್ದರು.