ಕುಶಾಲನಗರ: ದೇಶದ ವಿವಿಧ ರಾಜ್ಯಗಳಲ್ಲಿ ಪ್ರತ್ಯೇಕವಾದ ಕಲೆ, ಸಂಸ್ಕೃತಿ ಹಾಗೂ ಪರಂಪರೆ ಇದ್ದು, ಇದರೊಂದಿಗೆ ಜಾತಿ, ಮತ, ಭಾಷೆ ಕೂಡ ಬೇರೆಯಾಗಿದ್ದರೂ ನಾವೆಲ್ಲ ಭಾರತೀಯರು ಎಂಬ ಭಾವನೆಯನ್ನು ಮೈಗೂಡಿಸಿಕೊಂಡು ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಳ್ಳುವಲ್ಲಿ ಕೂಡಿಗೆಯ ಸೈನಿಕ ಶಾಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಯಶಸ್ವಿಯಾಗಿದೆ.
ಕರ್ನಾಟಕ ಮತ್ತು ಗೋವಾ ರಾಜ್ಯಗಳ ರಾಷ್ಟ್ರೀಯ ಸೈನಿಕ ದಳ ಮತ್ತು 19 ಎನ್ ಸಿಸಿ ಬೆಟಲಿಯನ್ ಮಡಿಕೇರಿ ವತಿಯಿಂದ ಕೂಡಿಗೆ ಸೈನಿಕ ಶಾಲೆ ಆವರಣದಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ 12 ದಿನಗಳ ಕಾಲ ಹಮ್ಮಿಕೊಂಡಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ದೇಶದ 25 ರಾಜ್ಯಗಳ ಸುಮಾರು 420 ಎನ್ಸಿಸಿ ಕೆಡೆಟ್ ಗಳು ಹಾಗೂ 30 ಮಂದಿ ಎನ್ಸಿಸಿ ಆಫೀಸರ್ಸ್ ಗಳು ಸೇರಿದಂತೆ ಒಟ್ಟು 450 ಮಂದಿ ಭಾವೈಕ್ಯತಾ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ ಭೂ ಸೇನಾ ದಳ, ವಾಯ ದಳ ಹಾಗೂ ಜಲ ದಳಗಳಿಂದ ಪ್ರತಿ ರಾಜ್ಯದಿಂದ ತಲಾ 16 ಮಂದಿ ಎನ್ಸಿಸಿ ಕೆಡೆಟ್ ಗಳು ಈ ಭಾವೈಕ್ಯತಾ ಶಿಬಿರದಲ್ಲಿ ಪಾಲ್ಗೊಂಡಿದ್ದು, ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಎಲ್ಲ ರಾಜ್ಯಗಳಿಂದ ಆಯ್ದ 10 ಮಂದಿ ಬಾಲಕರು ಮತ್ತು 6 ಮಂದಿ ಬಾಲಕಿಯರು ಭಾಗವಹಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳ ನಡುವೆ ಕಲೆ ಮತ್ತು ಸಂಸ್ಕೃತಿಯೊಂದಿಗೆ ಭಾತೃತ್ವದ ಸಂಬಂಧವನ್ನು ಬೆಸೆಯುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಭಾವೈಕ್ಯತಾ ಸಾಂಸ್ಕೃತಿಕ ಶಿಬಿರವನ್ನು ಆಯೋಜಿಸಲಾಗಿದ್ದು, ಈ ಮೂಲಕ ವಿದ್ಯಾರ್ಥಿಗಳಲ್ಲಿ ಪರಸ್ಪರ ಕಲೆ,ಸಂಸ್ಕೃತಿಯನ್ನು ವಿನಿಮಯ ಮಾಡಿಕೊಳ್ಳಲು ಇದು ಸೂಕ್ತ ವೇದಿಕೆಯಾಗಿದೆ. ನಶಿಸಿ ಹೋಗುತ್ತಿರುವ ಕಲೆ,ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರೊಂದಿಗೆ ಮುಂದಿನ ಜನಾಂಗಕ್ಕೆ ಪರಿಚಯಿಸಲು ಈ ಶಿಬಿರ ಉತ್ತಮ ವೇದಿಕೆಯಾಗಿದ್ದು, ಹಾಗೂ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ಸಾಧಿಸುಲು ಕೂಡ ಈ ಶಿಬಿರ ಸಹಕಾರಿಯಾಗಿದೆ.
ನಮ್ಮ ದೇಶದಲ್ಲಿ ವಿವಿಧ ಧರ್ಮಗಳು, ಸಾಂಸ್ಕೃತಿಕ ಕಲೆಗಳು, ಬಹು ಭಾಷಾ ಜನರು ವಾಸಿಸುತ್ತಿದ್ದು, ನಾವೆಲ್ಲ ಒಂದೇ ಎಂಬ ಭಾವನೆಯನ್ನು ಈ ಶಿಬಿರ ವಿದ್ಯಾರ್ಥಿಗಳಲ್ಲಿ ಬಿತ್ತುವಲ್ಲಿ ಕೂಡ ಯಶಸ್ವಿಯಾಗಿದೆ.ಶಿಬಿರಾಧಿಕಾರಿ ಕರ್ನಾಲ್ ಎಸ್.ಆರ್.ಶ್ರೀರಾಮ್ ನೇತೃತ್ವದಲ್ಲಿ 12 ದಿನಗಳ ಕಾಲ ಎನ್ ಸಿಸಿ ವಿದ್ಯಾರ್ಥಿಗಳಿಗೆ ವಿವಿಧ ಸಂಸ್ಕೃತಿ, ಕಲೆ, ಕ್ವಿಜ್ ಕುರಿತು ಹಾಗೂ ಕ್ರೀಡಾ ಚಟುವಟಿಕೆಗಳನ್ನು ಹಾಗೂ ಎನ್ಐಎಪಿ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸುವುದರೊಂದಿಗೆ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆ ಹಾಗೂ ಟ್ರಕ್ಕಿಂಗ್ ಕೂಡ ಆಯೋಜಿಸಲಾಗಿದೆ.