ಕುಶಾಲನಗರ: ಮಡಿಕೇರಿ ಅರಣ್ಯ ವಿಭಾಗ ಮತ್ತು ದುಬಾರೆ ಅಮ್ಮಾಳೆ ಗ್ರಾಮ ಅರಣ್ಯ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಆನೆಗಳ ದಿನಾಚರಣೆ ಅಂಗವಾಗಿ ಕಾವೇರಿ ನದಿಯ ದಂಡೆ ಮೇಲಿರುವ ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಗಳಿಗೆ ವಿವಿಧ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು.
ದುಬಾರೆ ಎಲ್ಲೇಡೆ ಪ್ರವಾಸಿಗರ ಜನಜಂಗುಳಿ ಶಿಬಿರದಲ್ಲಿ ಹಬ್ಬದ ಸಡಗರ ಸಂಭ್ರಮ. ನವ ವಧುವರರಂತೆ ಶೃಂಗಾರಗೊಂಡಿದ್ದ ಸಾಕಾನೆಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ದುಬಾರೆ ಅರಣ್ಯ ಪ್ರದೇಶದ ಹಳೆ ಐಬಿ ಮುಂಬಾಗದಲ್ಲಿ ಹಸಿರು ಮೈ ಹೊದ್ದು ಮಲಗಿದ್ದ ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗಿತ್ತು. ಈ ಕ್ಷಣಕ್ಕಾಗಿ ಆನೆಗಳಿಗೆ ಕೆಲವು ದಿನಗಳಿಂದ ನುರಿತ ಮಾವುತರಿಂದ ವಿಶೇಷ ತರಬೇತಿ ನೀಡಿ ಅಣಿಗೊಳಿಸಲಾಗಿತ್ತು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಆನೆಗಳಿಗೆ ಮಾವುತರುಗಳು ಬೆಳಿಗ್ಗೆ ಮತ್ತು ಸಂಜೆ ಅಭ್ಯಾಸ ಮತ್ತು ತರಬೇತಿ ನೀಡಿದ್ದರು. ಫುಟ್ಬಾಲ್ ಆಟ ಕುರಿತು ಮಾವುತರಾದ ಡೋಬಿ,ಗಿರೀಶ್, ನವೀದ್, ಶ್ರೀನಿವಾಸ್, ರಂಜನ್ ಮತ್ತು ತೀರ್ಥರಾಮ, ಮಯೂರ , ಪರಶುರಾಮನಿಗೆ ಉತ್ತಮ ತರಬೇತಿ ನೀಡಿದ್ದರು. ಒಟ್ಟು 27 ಆನೆಗಳ ಪೈಕಿ 25 ಸಾಕಾನೆಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ನೋಡುಗರ ಮನಸೊರೆಗೊಳಿಸಿದವು.
ಕಾರ್ಯಕ್ರಮದಲ್ಲಿದ್ದ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಎಂ.ಸಿ.ನಾಣಯ್ಯ ಮಾತನಾಡಿ ಪಶ್ಚಿಮಘಟ್ಟ ಅರಣ್ಯ ಪ್ರದೇಶದ ಸಂರಕ್ಷಣೆಗೆ ಒತ್ತು ನೀಡದೆ ಹೋದರೆ ಕಾವೇರಿ ನದಿ ವಿನಾಶದ ಅಂಚಿಗೆ ಹೋಗಿ ಬೆಂಗಳೂರಿನ ಸುಮಾರು 1 ಕೋಟಿ ಜನರಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗಲಿದೆ, ಆದುದ್ದರಿಂದ ಅರಣ್ಯ ಸಂಪತ್ತು, ವನ್ಯಜೀವಿ ಹಾಗೂ ನದಿ ಮೂಲಗಳ ರಕ್ಷಣೆಯೊಂದಿಗೆ ಕೊಡಗಿನ ಅಭಿವೃದ್ಧಿಗೆ 100 ಕೋಟಿ ಅನುದಾನವನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಉತ್ತರ ಭಾರತದ ಗಂಗಾ ನದಿಯ ಸ್ವಚತೆಗೆ ಪ್ರಧಾನ ಮಂತ್ರಿಗಳು ಕೈಗೊಂಡಿರುವ ಯೋಜನೆಯಂತೆ ದಕ್ಷಿಣ ಭಾರತದ ಜೀವನದಿ ಕಾವೇರಿ ನದಿಯ ಸ್ವಚತೆ ಹಾಗೂ ಪಾವಿತ್ರ್ಯತೆಯನ್ನು ಕಾಪಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ವಿಶೇಷ ಪ್ಯಾಕೇಜ್ಅನ್ನು ಘೋಷಣೆ ಮಾಡಬೇಕು ಎಂದು ನಾಣಯ್ಯ ಒತ್ತಾಯಿಸಿದರು.
ದೇಶದಲ್ಲಿರುವ ಅಪಾರವಾದ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ದುರ್ಬಳಕೆ ಮಾಡಿಕೊಂಡರೆ ಮಾನವ ಕುಲ ವಿನಾಶದ ಅಂಚಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರ ಅವರು ಮಲೆನಾಡು ಪ್ರದೇಶಗಳಲ್ಲಿ ಆನೆ ಮತ್ತು ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಿದ್ದು, ಈ ಸಂಘರ್ಷಕ್ಕೆ ಕಡಿವಾಣ ಹಾಕಬೇಕು ಎಂದರು.
ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 3500 ಸಾವಿರ ಇದ್ದ ಆನೆಗಳ ಸಂಖ್ಯೆ 2015ಕ್ಕೆ ಸುಮಾರು 7000 ದಾಟಿದ್ದು, ಇವುಗಳ ವಾಸ ಸ್ಥಳದ ಕೊರತೆಯಿಂದ ಕಾಡಿನಿಂದ ನಾಡಿಗೆ ಲಗ್ಗೆ ಹಾಕುವ ಪರಿಸ್ಥಿತಿ ಬಂದಿದೆ. ಅರಣ್ಯ ಪ್ರದೇಶದ ಅಂಚಿನಲ್ಲಿ ರೈತಾಪಿ ವರ್ಗ ಕೈಗೊಂಡಿರುವ ಕಾಫಿ, ಬಾಳೆ, ಭತ್ತ ಮತ್ತಿತರ ಕೃಷಿ ಚಟುವಟಿಕೆಗಳ ಮೇಲೆ ಕಾಡಾನೆಗಳು ನಿರಂತರ ದಾಳಿ ಅಪಾರ ಪ್ರಮಾಣದಲ್ಲಿ ಕೃಷಿಯನ್ನು ನಾಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಆನೆ ಮತ್ತು ಮಾನವ ಸಂಘರ್ಷ ನಡೆಯುತ್ತಿದೆ. ಕಾಡಾನೆಗಳ ದಾಳಿಯಿಂದ ಅಪಾರ ನಷ್ಟ ಅನುಭವಿಸುತ್ತಿರುವ ರೈತರು ತಮ್ಮ ತೋಟ ಮತ್ತು ಕೃಷಿ ಚಟುವಟಿಕೆಗಳನ್ನು ಹಾಗೂ ಜಿಲ್ಲೆಯನ್ನು ಬಿಟ್ಟು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಆನೆಗಳಿಗೂ ರಕ್ಷಣೆ ನೀಡಬೇಕು ಅದೇ ರೀತಿ ರೈತ ವರ್ಗಕ್ಕೂ ರಕ್ಷಣೆ ನೀಡಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸೋಲಾರ್ ಮತ್ತು ಕಂದಕಗಳನ್ನು ನಿರ್ಮಾಣ ಮಾಡುವ ಮೂಲಕ ಮುಕ್ತಗೊಳಿಸಬೇಕು. ಜೊತೆಗೆ ಜಿಲ್ಲೆಯಲ್ಲಿ ನಿರಂತರವಾಗಿ ಪುಂಡಾಟಿಕೆ ನಡೆಸುತ್ತಿರುವ ಸುಮಾರು 25 ಕಾಡಾನೆಗಳನ್ನು ಹಿಡಿದು ಪಳಗಿಸಲು ಸರ್ಕಾರ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸುವ ಮೂಲಕ ಕೊಡಗಿನಲ್ಲಿ ಕಾಡಾನೆ ಹಾವಳಿಯನ್ನು ತಡೆಗಟ್ಟಬೇಕು ಎಂದು ನಾಣಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದರು.
ಕಳೆದ ಅನೇಕ ವರ್ಷಗಳಿಂದ ದುಬಾರೆ ಸಾಕಾನೆ ಶಿಬಿರದಲ್ಲಿ ಮಾವುತರಾಗಿ ಕಾರ್ಯನಿರ್ವಹಿಸುತ್ತಿರುವ 25 ಮಂದಿಯನ್ನು ಕೂಡಲೇ ಖಾಯಂಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಸಿ.ನಾಣಯ್ಯ ಒತ್ತಾಯಿಸಿದರು.
ವಿವಿಧಡೆಗಳಲ್ಲಿ ಪುಂಡಾಟಿಕೆ ನಡೆಸುವ ಮೂಲಕ ತೊಂದರೆ ನೀಡುತ್ತಿದ್ದ ಕಾಡಾನೆಗಳನ್ನು ಹಿಡಿದು ಪಳಗಿಸುವಲ್ಲಿ ವಿಶೇಷ ಪರಿಣತಿ ಹೊಂದಿರುವ ಮಾವುತರು ಮತ್ತು ಕಾವಾಡಿಗಳು ತಮ್ಮ ಜೀವದ ಹಂಗನ್ನು ತೊರೆದು ಆನೆಗಳೊಂದಿಗೆ ತಮ್ಮ ಜೀವನ ಕಂಡುಕೊಂಡಿದ್ದಾರೆ. ಇಂತಹ ಮಾವುತರ ಸೇವೆಯನ್ನು ವಿಶೇಷವಾಗಿ ಪರಿಗಣಿಸುವ ಮೂಲಕ ಹೆಚ್ಚಿನ ಸೌಲಭ್ಯ ಒದಗಿಸಬೇಕು. ಖಾಯಂ ಆಗದೆ ಉಳಿದಿರುವ 25 ಮಂದಿ ಮಾವುತರನ್ನು ಮುಂದಿನ ಮೂರು ತಿಂಗಳೊಳಗೆ ಖಾಯಂಗೊಳಿಸಬೇಕು ಎಂದು ಅರಣ್ಯ ಸಚಿವ ರಮಾನಾಥ ರೈ ಅವರನ್ನು ಒತ್ತಾಯಿಸುವುದಾಗಿ ಹೇಳಿದರು.
ರಾಜ್ಯದಲ್ಲಿ ಎರಡು ಜಿಲ್ಲೆಗಳಲ್ಲಿ ಬಿದಿರು ಕಾರ್ಖಾನೆ ಸ್ಥಾಪಿಸಲು ನಿಗಮ ಮುಂದಾಗಿದ್ದು, ಒಂದು ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಉತ್ತರ ಕರ್ನಾಟಕದ ದಾಂಡೇಲಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.
ಆನೆಗಳಿಗೆ ಪ್ರಿಯವಾದ ಆಹಾರವಾದ ಬಿದಿರುಗಳನ್ನು ಬೆಳೆಯಲು ಪ್ರೋತ್ಸಾಹ ನೀಡುವ ಮೂಲಕ ಆಹಾರ ಕೊರತೆಯನ್ನು ನೀಗಿಸಲಾಗುವುದು ಮತ್ತು ಬಿದಿರು ಕರಕುಶಲತೆಯನ್ನು ಹೊಂದಿರುವ ಮೇದರ ಜನಾಂಗ ಮತ್ತು ಹಿಂದುಳಿದ ವರ್ಗಕ್ಕೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಇದರೊಂದಿಗೆ ಬಿದಿರು ಉತ್ಪನ್ನಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಸೃಷ್ಟಿಸಲಾಗುವುದು ಎಂದರು.
ಮಡಿಕೇರಿ ಅರಣ್ಯ ವಿಭಾಗದ ಉಪ-ಸಂರಕ್ಷಣಾಧಿಕಾರಿ ಏಡುಕೊಂಡಲು, ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯನಾಬಿ ವಹಿಸಿದ್ದರು. ಜಿ.ಪಂ.ಸದಸ್ಯೆ ಸುಲೋಚನಾ, ತಾ.ಪಂ.ಉಪಾಧ್ಯಕ್ಷೆ ರಾಣಿ, ದುಬಾರೆ ಅಮ್ಮಾಳೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಜೆ.ಬಿ.ನಾಗೇಶ್, ಮಡಿಕೇರಿ ಅರಣ್ಯ ಸಂಚಾರಿ ದಳದ ಉಪ-ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಉಮಾಶಂಕರ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಎಂ.ಎಸ್.ಚಿಣ್ಣಪ್ಪ, ದುಬಾರೆ ಸಾಕಾನೆ ಶಿಬಿರದ ಸಹಾಯಕ ಅರಣ್ಯಾಧಿಕಾರಿ ರಂಜನ್, ನಂಜರಾಯಪಟ್ಟಣದ ಗ್ರಾ.ಪಂ.ಸದಸ್ಯ ಐಯ್ಯಂಡ್ರ ಲೋಕನಾಥ್ ಮತ್ತಿತರರು ಉಪಸ್ಥಿತರಿದ್ದರು. ಮಾವುತರಾದ ಈರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಡಿಕೇರಿ ವಿಭಾಗದ ಎಸಿಎಫ್ ಪೂರ್ಂಇಮ ಸ್ವಾಗತಿಸಿದರು