ಹಿರಿಕ್ಯಾತನಹಳ್ಳಿ: ತಂಬಾಕು ಬೆಲೆ ಕುಸಿತಗೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ತಂಬಾಕು ಬೆಳೆಗಾರರು ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯ ತಂಬಾಕು ಮಂಡಳಿ ಪ್ಲಾಟ್ ಫಾರಂ ನಂ.3ರಲ್ಲಿ ಹರಾಜು ಮಾರುಕಟ್ಟೆಯನ್ನು ಸ್ಥಗಿತಗೊಳಿಸಿ ಪ್ರತಿಭಟಿಸಿದರು.
ತಂಬಾಕಿಗೆ ಸೂಕ್ತ ಬೆಲೆ ನೀಡಿ ಖರೀದಿಸದೆ ಕೊಂಡುಕೊಳ್ಳುವ ಕಂಪನಿಗಳು ಹಾಗೂ ಅಧಿಕಾರಿಗಳು ವಂಚಿಸುತ್ತಿದ್ದಾರೆ ಮೊದಲಿನಂತೆ ಸೂಕ್ತ ಬೆಲೆಯಲ್ಲಿ ಖರೀದಿಸಬೇಕು ಎಂದು ಆಗ್ರಹಿಸಿದರು. ಮಂಟಿಕೊಪ್ಪಲು ಹಾಗೂ ಬೀಜಿಗನಹಳ್ಳಿ ಗ್ರಾಮಗಳಿಗೆ ಹರಾಜು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ರೈತರು ಸುಮಾರು 517ಕ್ಕೂ ಹೆಚ್ಚು ಬೇಲ್ಗಳನ್ನು ಮಾರಾಟಕ್ಕೆ ತಂದಿದ್ದು ಕೊನೆಯ ಎರಡು ಸಾಲಿನವರೆಗೆ ಮಾರುಕಟ್ಟೆಯಲ್ಲಿ ಬೆಲೆಯನ್ನು ವೀಕ್ಷಿಸಿದ ರೈತರು ನಂತರ ತಡೆದು ಪ್ರತಿಭಟಿಸಿದರು.
ಮಾರುಕಟ್ಟೆಯಲ್ಲಿ ಮೊದಲಿನಿಂದ ಕಡಿಮೆ ಬೆಲೆಗೆ ಖರೀದಿಸಿ ಕೊನೆಯಲ್ಲಿ ಪರಿಚಯ ರೈತರೊಬ್ಬರ ಬೇಲ್ಗೆ ಹೆಚ್ಚು ಬೆಲೆ ನೀಡಿರುವುದನ್ನು ಗಮನಿಸಿದ ರೈತರು ಮಾರುಕಟ್ಟೆಯನ್ನು ನಿಲ್ಲಿಸಲು ಮುಂದಾದರು. ಮಾರುಕಟ್ಟೆ ಪ್ರಾರಂಭದಲ್ಲಿ 160-162 ರೂ.ಗಳಿಗೆ ಮಾರಾಟವಾಗುತ್ತಿದ್ದ ತಂಬಾಕಿಗೆ ಅದೇ ಗ್ರೇಡ್ ನ ತಂಬಾಕಿಗೆ 120-130 ರೂ ಬೆಲೆಗೆ ಖರೀದಿಸುತ್ತಿರುವುದರಿಂದ ಸುಮಾರು 30-40 ರೂ. ಕಡಿಮೆಯಾಗಿದೆ. ಕಳೆದ ಕ್ಲಸ್ಟರ್ ನಲ್ಲಿ 3ನೇ ದರ್ಜೆಯ ತಂಬಾಕಿಗೆ 163 ರೂ. ಬೆಲೆ ದೊರೆತಿದ್ದು, ಅದೇ ಗ್ರೇಡ್ನ ತಂಬಾಕಿಗೆ ಈ ದಿನ 130 ರೂ ದೊರೆತಿದ್ದು, 4ನೇ ಗ್ರೇಡ್ ತಂಬಾಕಿಗೆ 120ಕ್ಕೆ ಮಾರಾಟ ಮಾಡಿ ಅದೇ ಗ್ರೇಡ್ ತಂಬಾಕಿಗೆ ಇಂದು 98 ರೂ.ಗಳಿಗೆ ಮಾರಾಟವಾಗಿದ್ದು 30-40 ರೂ.ಗಳು ಕುಸಿತಗೊಂಡಿದೆ ಎಂದು ರೈತರು ದೂರಿದರು.
ರೈತರು ಬೆಲೆ ಕಡಿಮೆಯಾಗಿದೆ ಆರ್ ಎಂಓ ಹಾಗೂ ಜನ ಪ್ರತಿನಿಧಿಗಳು ಬರುವವರೆಗೆ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಲ್ಲ ರೈತರನ್ನೂ ಒಂದೇ ಸಮ ಸರಿಯಾದ ಬೆಲೆ ಕೊಟ್ಟು ಖರೀದಿಸದೆ ರೈತರನ್ನು ವಂಚಿಸುತ್ತಿದ್ದಾರೆ. ಈ ದಿನ ಮಾರಾಟವಾಗಿರುವ ಎಲ್ಲ ಬೇಲ್ಗಳನ್ನು ನಾಳೆಯ ಮಾರುಕಟ್ಟೆಯಲ್ಲಿ ಪುನಃ ಮಾರಾಟ ಮಾಡುವಂತೆ ಪಟ್ಟು ಹಿಡಿದು ಹೊರ ನಡೆದ ರೈತರನ್ನು ಹರಾಜು ಅಧೀಕ್ಷಕ ಗಣೇಶ್ ರೈತರ ಮನವೊಲಿಸಿ ಹರಾಜು ಪ್ರಕ್ರಿಯೆ ಪುನರಾರಂಭಿಸಿದರು.