ಚಾಮರಾಜನಗರ: ವನ್ಯಜೀವಿಗಳು ತನ್ನದೇ ಆದ ಪರಿದಿಯ ಮಿತಿಯೊಳಗೆ ವಾಸಿಸುತ್ತಿರುತ್ತವೆ. ಅದರಲ್ಲೂ ಹುಲಿಗಳು ಅರಣ್ಯ ಪ್ರದೇಶದಲ್ಲಿ ಗಡಿರೇಖೆ ಮಾಡಿಕೊಂಡು ತನ್ನದೇ ಆದ ಅರಣ್ಯ ವ್ಯಾಪ್ತಿಯಲ್ಲಿರುತ್ತವೆ. ಒಂದು ವೇಳೆ ಎರಡು ಹುಲಿಗಳೂ ಒಂದೆಡೆ ಸೇರಿದರೆ ಕಾದಾಟ ನಡೆಸುತ್ತವೆ, ಆದ್ರೆ ಈ ಹೆಣ್ಣು ಹುಲಿಯೊಂದು ರಸ್ತೆ ಮಧ್ಯದಲ್ಲಿಯೇ ಮೃತಪಟ್ಟಿರುವುದರಿಂದ ಹಲವು ಸಂಶಯಗಳಿಗೆ ಎಡೆಮಾಡಿದೆ.
ಚಾಮರಾಜನಗರ ಜಿಲ್ಲೆ ಕೆ.ಗುಡಿ- ಕುಂಟಗುಡಿ ನಡುವೆ ಎರಡು ಹುಲಿಗಳ ಕಾದಾಟದಿಂದಾಗಿ ಆರು ವರ್ಷದ ಹೆಣ್ಣು ಹುಲಿಯೊಂದು ಮೃತಪಟ್ಟಿದೆ. ಬೆಳಿಗ್ಗೆ ಎರಡು ಹುಲಿಗಳೂ ಕಾದಾಟ ನಡೆಸಿದ್ದು, ಹೆಜ್ಜೆಯ ಗುರುತುಗಳು ಪತ್ತೆಯಾಗಿದ್ದು, ರಸ್ತೆಯ ಪಕ್ಕದಲ್ಲಿಯೇ ಈ ಹುಲಿ ಮೃತಪಟ್ಟಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ, ಬಿಳಿಗಿರಿ ರಂಗನಬೆಟ್ಟದ ಹುಲಿಸಂರಕ್ಷಿತಾರಣ್ಯಕ್ಕೆ ಸೇರಿದೆ. ಈ ಅರಣ್ಯದಲ್ಲಿ ಸುಮಾರು 55 ಹುಲಿಗಳಿವೆ. ಈ ಹುಲಿಗಳು ಕಾದಾಟ ನಡೆಸಿದ್ದು, ಮೃತಪಟ್ಟ ಹುಲಿಯ ಕಾಲು ಮತ್ತು ತಲೆಯ ಭಾಗದಲ್ಲಿ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಹುಲಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ನಾಗರಹೊಳೆಯ ವನ್ಯಜೀವಿ ವೈದ್ಯರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ. ಈ ಕೆ.ಗುಡಿ ಅರಣ್ಯ ಪ್ರದೇಶದಲ್ಲಿ ಹೆಚ್ಚು ಹುಲಿಗಳಿದ್ದು, ಒಂದು ವರ್ಷದಲ್ಲಿ ಮೂರು ಹುಲಿಗಳು ಮೃತಪಟ್ಟಿವೆ. ರಸ್ತೆಯ ಬದಿಯಲ್ಲಿಯೇ ಹುಲಿ ಬಿದ್ದಿರುವುದನ್ನು ಕಂಡು ದಾರಿಹೋಕರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರಮೂರ್ತಿರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಡಿದಾದ ಅರಣ್ಯಪ್ರದೇಶವಾಗಿದ್ದು, ಚಾಮರಾಜನಗರದಿಂದ ಕೆ.ಗುಡಿಗೆ ತೆರಳುವ ರಸ್ತೆಯ ಮಧ್ಯದಲ್ಲಿಯೇ ಈ ಹುಲಿ ಮೃತಪಟ್ಟಿದೆ. ಹಿರಿಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು.
ಈ ಹುಲಿಯು ಕಾದಾಟದಿಂದಾಗಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸುತ್ತಿದ್ದಾರೆ ಆದರೆ ಈ ಭಾಗದಲ್ಲಿ ಕಳ್ಳಬೇಟೆಗಾರರು ಹೆಚ್ಚಾಗಿದ್ದಾರೆ. ಅದರಿಂದಾಗಿ ಬೇಟೆಗಾರರು ಹುಲಿಯನ್ನು ಬೇಟೆಯಾಡಿದ್ದು, ರಸ್ತೆಬದಿಯಲ್ಲಿ ಹುಲಿ ಮೃತಪಟ್ಟಿದ್ದರಿಂದಾಗಿ ಹುಲಿಯನ್ನು ಬಿಟ್ಟು ಪರಾರಿಯಾಗಿದ್ದಾರಾ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಸಿದ ನಂತರ ಸತ್ಯಾಸತ್ಯತೆ ಹೊರಬೀಳಲಿದೆ.