ಮಡಿಕೇರಿ: ಜಿಲ್ಲೆಯಲ್ಲ್ಲಿ ಟಿಪ್ಪು ಜಯಂತಿಯಂದು(ನ.10) ನಡೆದ ಅಹಿತಕರ ಘಟನೆಗೆ ಸಂಬಂಧ ಪಟ್ಟಂತೆ ಜಾರಿಯಲ್ಲಿದ್ದ ಸೆಕ್ಷನ್ 144ನ್ನು ನ. 25 ರವರೆಗೆ ಮುಂದುವರೆಸಲಾಗಿದೆ.
ಈ ಕುರಿತು ಪ್ರಭಾರ ಜಿಲ್ಲಾಧಿಕಾರಿ ಎಂ.ಕೂಮರ್ ರಾವ್, ಎಸ್ಪಿ ವರ್ತಿಕಾ ಕಟಿಯಾರ್ ಮಾಹಿತಿ ನೀಡಿದ್ದು, ಪ್ರತಿದಿನ ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯವರೆಗೆ (ನ.25ರ ಬೆಳಗ್ಗೆ 6ವರೆಗೆ) ಮಾತ್ರ ಸೀಮಿತವಾಗಿರುತ್ತದೆ ಎಂದು ತಿಳಿಸಿದ್ದಾರೆ. ಘಟನೆ ಸಂಬಂಧ ಇದುವರೆಗೆ 64 ಮಂದಿಯನ್ನು ಬಂಧಿಸಿ, 35ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಸಂದರ್ಭ ಸರ್ಕಾರದ ಕಾರ್ಯಕ್ರಮ ಹೊರತುಪಡಿಸಿ ಇನ್ನಿತರ ಯಾವುದೇ ಸಭೆ ಸಮಾರಂಭ, ಮೆರವಣಿಗೆಯನ್ನು ನಡೆಸಬಾರದು. ಐದು ಜನರಿಗಿಂತ ಮೇಲ್ಪಟ್ಟು ಗುಂಪು ಸೇರಬಾರದು. ಯಾವುದೇ ರೀತಿಯ ಆಯುಧಗಳನ್ನು ಹಿಡಿದು ತಿರುಗಾಡಬಾರದು, ಜಿಲ್ಲೆಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಸಂಬಂಧ ಸ್ಥಿತಿಗತಿಯ ಬಗ್ಗೆ ಉಪ ವಿಭಾಗೀಯ ದಂಡಾಧಿಕಾರಿ ಹಾಗೂ ಜಿಲ್ಲೆಯ ಮೂರು ತಾಲ್ಲೂಕು ದಂಡಾಧಿಕಾರಿಗಳಿಂದ ಮತ್ತು ಜನ ಸಂಪರ್ಕವಿರುವ ಹಾಗೂ ಸಾರ್ವಜನಿಕ ಸೇವೆ ಒದಗಿಸುವ ವಿವಿಧ ಇಲಾಖೆಗಳಿಂದ ವರದಿ ಪಡೆಯಲಾಗಿದ್ದು, ಈ ವರದಿಗಳಲ್ಲಿ ಜಿಲ್ಲೆಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ.
ಯಾವುದೇ ಮಾರಕಾಯುಧಗಳನ್ನು ಹಾಗೂ ಕಲ್ಲು ಮತ್ತಿತರ ನಿರ್ಬಂಧಿತ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಯಾವುದೇ ವ್ಯಕ್ತಿ ಅಥವಾ ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ ಪ್ರಚೋದನಾಕಾರಿ ಹೇಳಿಕೆ ಅಥವಾ ಭಾಷಣ ಮಾಡುವಂತಿಲ್ಲ. ಸ್ಥಳೀಯ ಸಂಸ್ಥೆಗಳು ಅಥವಾ ಸ್ಥಳೀಯ ಸಕ್ಷಮ ಪ್ರಾಧಿಕಾರಗಳು ಯಾವುದೇ ಸಭೆ ಸಮಾರಂಭಗಳಿಗೆ ಅನುಮತಿ ಕೋರಿ ಅರ್ಜಿಗಳು ಸ್ವೀಕೃತವಾದಲ್ಲಿ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಆರಕ್ಷಕ ಉಪ ನಿರೀಕ್ಷಕರಿಂದ ಕಡ್ಡಾಯವಾಗಿ ನಿರಕ್ಷೇಪಣಾ ಪತ್ರ ಪಡೆದು ಕ್ರಮ ಕೈಗೊಳ್ಳುವುದು. ವಿಶೇಷ ಪ್ರಕರಣಗಳಲ್ಲಿ ಜಿಲ್ಲಾ ದಂಡಾಧಿಕಾರಿಯವರ ಅನುಮತಿ ಪಡೆಯುವಂತೆ, ಸಾರ್ವಜನಿಕ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಪಡಿಸುವಂತಿಲ್ಲ ಮತ್ತು ವರ್ತಿಸುವಂತಿಲ್ಲ ಎಂದು ಷರತ್ತುಗಳನ್ನು ವಿಧಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರು ಮಾಹಿತಿ ನೀಡಿ ಘಟನೆಗೆ ಸಂಬಂಧಿಸಿದಂತೆ 64 ಮಂದಿಯನ್ನು ಬಂಧಿಸಿ, 35 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾನೂನು ಸುವ್ಯವಸ್ಥೆ ಹತೋಟಿಗೆ ಬಂದಿದ್ದು, ಆ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.