ಗುಂಡ್ಲುಪೇಟೆ: ಆಹಾರ ಅರಸಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ್ ಅರಣ್ಯವಲಯದ ಕಾಡಿನಿಂದ 4 ಆನೆಗಳು ಕಾಡಿಗೆ ಹಿಂದಿರುಗುವ ವೇಳೆಯಲ್ಲಿ ಗುಂಪಿನಿಂದ ಬೇರ್ಪಟ್ಟ ಸಲಗವೊಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಬಲಿ ಪಡೆದಿದೆ.
ಗುಂಡ್ಲುಪೇಟೆ ತಾಲೂಕಿನ ದೊಡ್ಡಹುಂಡಿ ಗ್ರಾಮದ ಜಮೀನಿನಲ್ಲಿ ಕಾಡಾನೆ ದಾಳಿಯಿಂದ ರೈತನೊಬ್ಬ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಮೃತನ ಪತ್ನಿಗೆ ಮೂಳೆ ಮುರಿದಿರುವ ದುರ್ಘಟನೆ ನಡೆದಿದೆ. ಗುರುವಾರ ಮಹದೇವಸ್ವಾಮಿ ತನ್ನ ಪತ್ನಿಯೊಂದಿಗೆ ಅವರ ಜಮೀನಿನಲ್ಲಿ ಹತ್ತಿಕೀಳಲು ತೆರಳಿದ್ದರು. ಈ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಒಂಟಿ ಸಲಗವೊಂದನ್ನು ಕಂಡ ದಂಪತಿಗಳು ಗಾಬರಿಗೊಂಡು ಓಡಲು ಆರಂಭಿಸಿದಾಗ ಆನೆಯು ಮಹದೇವಸ್ವಾಮಿಯ ಪತ್ನಿ ರಾಣಿಯನ್ನು ಸೊಂಡಿಲಿನಿಂದ ಎತ್ತಿ ಬೀಸಾಡಿದೆ. ನಂತರ ಮಹದೇವಸ್ವಾಮಿಯನ್ನು ಅಟ್ಟಿಸಿಕೊಂಡು ಹೋಗಿ ಕೊಂಬಿನಿಂದ ತಿವಿದು ಸಾಯಿಸಿದೆ. ಇದನ್ನು ಕಂಡ ಪತ್ನಿ ಜೋರಾಗಿ ಕೂಗಿಕೊಂಡಾಗ ಅಕ್ಕ-ಪಕ್ಕದ ಜಮೀನಿನ ರೈತರು ಬರುತ್ತಿದ್ದಂತೆಯೇ ಆನೆಯು ಸಿದ್ದಯ್ಯನಹುಂಡಿ ಕಡೆಗೆ ಪಲಾಯನ ಮಾಡಿತು.
ಈ ಭಾಗದಲ್ಲಿ ಆನೆಗಳ ಕಾಟ ಹೆಚ್ಚಾದ್ದರಿಂದ ಆಕ್ರೋಶಗೊಂಡ ರೈತರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ ಗಂಟೆಗಳೇ ಕಳೆದರೂ ಬರದಿದ್ದ ಕಾರಣ ಆಕ್ರೋಶಗೊಂಡು 212 ರಾಷ್ಟ್ರೀಯ ಹೆದ್ದಾರಿಗೆ ಬಂದು ಬೆಳಿಗ್ಗೆ 9;30ರಿಂದ ಮಧ್ಯಾಹ್ನ 2 ಗಂಟೆಗಳವರೆಗೆ ರಸ್ತೆತಡೆ ನಡೆಸಿ ಟೈರ್ಗಳಿಗೆ ಬೆಂಕಿಹಚ್ಚಿ ಅರಣ್ಯ ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟುಹಿಡಿದಿದ್ದರಿಂದ ಊಟಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು ಇದರಿಂದ ನೂರಾರು ವಾಹನ ರಸ್ತೆಯಲ್ಲಿ ನಿಲ್ಲುವಂತಾಯಿತು. ನಂತರ ಸ್ಥಳಕ್ಕಾಗಮಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮರಡಿಮನಿ, ಕೆ.ಟಿ.ಪೂವಯ್ಯ ಹಾಗೂ ನಂಜನಗೂಡು ಎಸಿಎಫ್ ಯವರು ಪ್ರತಿಭಟನಾಕಾರರ ಮನವೊಲಿಸಿ ಇಲಾಖಾವತಿಯಿಂದ ತಕ್ಷಣ 2ಲಕ್ಷರೂ.ಗಳನ್ನು ಸ್ಥಳದಲ್ಲೇ ನೀಡಿದರು. ಬರುವ ವಾರದಲ್ಲಿ ಉಳಿದ 3ಲಕ್ಷ ರೂಪಾಯಿಗಳನ್ನು ನೀಡುವ ಹಾಗೂ ಮೃತರ ಮನೆಯವರಿಗೆ ಉದ್ಯೋಗ ನೀಡುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ನಂಜನಗೂಡು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಈ ಆನೆಗಳು ರಾತ್ರಿ ರಾಷ್ಟ್ರೀಯ ಹೆದ್ದಾರಿ ದಾಟಿ ಹುಣಸನಾಳು ಕಡೆಗೆ ತೆರಳಿದ್ದು ಬೆಳಿಗ್ಗೆ ಹಿರೀಕಾಟಿ ಗೇಟ್ಬಳಿ ಮನೆಯೊಂದರ ಪಕ್ಕದಲ್ಲಿದ್ದ ತಂತಿಕಲ್ಲುಗಳನ್ನು ಉರುಳಿಸಿ ಮತ್ತೆ ಹೆದ್ದಾರಿದಾಟಿ ದೊಡ್ಡಹುಂಡಿ ಮಾರ್ಗವಾಗಿ ಹಿಂದುರುಗುವಾಗ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನಂತರ ಅವು ದೊಡ್ಡಹುಂಡಿ ಮಾರ್ಗವಾಗಿ ನಂಜಗೂಡು ತಾಲ್ಲೂಕು ಕೂಗಲೂರು, ಕೃಷ್ಣಾಪುರ ಗ್ರಾಮಗಳ ಕಡೆ ತೆರಳಿದವು.