ಪಾಂಡವಪುರ: ಅಪ್ಪ-ಅಮ್ಮನ ಜಗಳದಲ್ಲಿ 5 ವರ್ಷದ ಶಾಲಾ ಬಾಲಕಿ ಜೀವತೆತ್ತ ಘಟನೆ ಬೀರಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಪಟ್ಟಣದ ಬೀರಶೆಟ್ಟಹಳ್ಳಿ ಗ್ರಾಮದಲ್ಲಿರುವ ಮೂಲತಃ ಹಾಸನ ಜಿಲ್ಲೆಯ ಬಾಣಾವಾರ ತಾಲೂಕಿನ ಕಾಶಿಘಟ್ಟದ ನಿವಾಸಿಗಳಾದ ಲತಾ ಮತ್ತು ಗಿರೀಶ್ ಅವರ ಪುತ್ರಿ ಪ್ರತೀಕ್ಷಾ (5) ಎಂಬಾಕೆಯೇ ಬಲಿಯಾಗಿದ್ದು, ಈಕೆಯ ತಾಯಿಯೇ ತನ್ನ ಪುತ್ರಿಯನ್ನು ವೇಲಿನಿಂದ ಬಿಗಿದು ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.
ಕೊಲೆಯಾಗಿರುವ 5 ವರ್ಷದ ಬಾಲಕಿ ಪ್ರತೀಕ್ಷಾ ಪಾಂಡವಪುರ ಪಟ್ಟಣದ ನಿರ್ಮಲಾ ಕಾನ್ವೆಂಟ್ ನಲ್ಲಿ ಯುಕೆಜಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈಕೆಯ ತಂದೆ ಗಿರೀಶ್ ತಾಲೂಕಿನ ಚಿಕ್ಕಬ್ಯಾಡರಹಳ್ಳಿ ಸರ್ಕಲ್ ನಲ್ಲಿ ಬೇಕರಿಯೊಂದನ್ನು ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಶನಿವಾರ ಗಿರೀಶ್ ಎಂದಿನಂತೆ ಬೇಕರಿ ಕೆಲಸಕ್ಕೆ ಹೋಗುವಾಗ ಶಾಲೆಗೆ ಎರಡು ದಿನಗಳು ರಜೆ ಇದ್ದುದ್ದರಿಂದ ತನ್ನ ಮಗಳನ್ನು ತನ್ನೊಂದಿಗೆ ಕರೆದೊಯ್ಯಲು ತೀರ್ಮಾನಿಸಿದ್ದರು. ಆದರೆ ಪತ್ನಿ ಲತಾ ನಿರಾಕರಿಸಿದ್ದಾರೆ ಎನ್ನಲಾಗಿದೆ. ನಂತರ ನೀನು ಮತ್ತು ನಿನ್ನ ಮಗಳೇ ಇರಿ ಎಂದು ಕೋಪಗೊಂಡು ಗಿರೀಶ್ ಚಿಕ್ಕಬ್ಯಾಡರಹಳ್ಳಿಗೆ ತೆರಳಿದ್ದಾರೆ.
ಗಿರೀಶ್ ನ ಪತ್ನಿ ಲತಾ ತನ್ನ ಮಗಳನ್ನು ವೇಲ್ ನಿಂದ ಬಿಗಿದು ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಮೆಡಿಕಲ್ ಸ್ಟೋರ್ಸ್ ಗೆ ಮಾತ್ರೆ ತೆಗೆದುಕೊಳ್ಳಲು ಹೋಗಿದ್ದಾಳೆ. ಆದರೆ ಮೆಡಿಕಲ್ ಸ್ಟೋರ್ಸ್ ನವರು ಈಕೆಗೆ ಮಾತ್ರೆ ನೀಡಲು ನಿರಾಕರಿಸಿದ್ದರು ಎನ್ನಲಾಗಿದ್ದು, ಪುನಃ ಈಕೆ ತನ್ನ ವೇಲಿನಿಂದಲೇ ಸ್ವತಃ ಆತ್ಮಹತ್ಯೆಗೆ ಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ನಂತರ ಕೊಲೆಗೈದ ತನ್ನ ಮಗಳೊಂದಿಗೆ ಪಾಂಡವಪುರ ರೈಲ್ವೆನಿಲ್ದಾಣಕ್ಕೆ ಹೋಗಿರುವ ಲತಾ ಅಲ್ಲಿ ತನ್ನ ತಂದೆಗೆ ದೂರವಾಣಿ ಮಾಡಿ ಪಾಂಡವಪುರಕ್ಕೆ ಬರುವಂತೆ ಹೇಳಿ ಇಲ್ಲಿಂದ ಪರಾರಿಯಾಗಲು ಯತ್ನಿಸಿದ್ದಳು. ನಂತರ ಕೊಲೆಯಾದ ಮಗುವಿನೊಂದಿಗೆ ಆಸ್ಪತ್ರೆಗೆ ಧಾವಿಸಿ ತನ್ನ ಮಗಳಿಗೆ ಹುಷಾರಿಲ್ಲ, ತಪಾಸಣೆ ಮಾಡಿ ಎಂದಾಗ ಮಗು ಸಾವನ್ನಪ್ಪಿದ್ದೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಬಳಿಕ ತನ್ನ ತಂದೆ ಜತೆ ಪಾಂಡವಪುರ ಪೊಲೀಸ್ ಠಾಣೆಗೆ ತೆರಳಿದ ಲತಾ, ನನ್ನ ಮಗಳು ಪ್ರತೀಕ್ಷಾಳನ್ನು ನನ್ನ ಪತಿ ಗಿರೀಶ್ ಕೊಲೆ ಮಾಡಿದ್ದಾರೆ ಎಂಬುದಾಗಿ ಸುಳ್ಳು ದೂರು ನೀಡಿದ್ದಾರೆ. ಬಳಿಕ ಈ ಸಂಬಂಧ ಪಾಂಡವಪುರ ಪೊಲೀಸರು, ಪ್ರತೀಕ್ಷಾಳ ತಂದೆ ಗಿರೀಶ್ ಹಾಗೂ ತಾಯಿ ಲತಾ ಅವರನ್ನು ವಿಚಾರಣೆಗೊಳಪಡಿಸಿ ತನಿಖೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ನನ್ನ ಮಗಳನ್ನು ನಾನೇ ಕೊಲೆ ಮಾಡಿದ್ದೇನೆ ಎಂಬುದಾಗಿ ಲತಾ ಪೊಲೀಸರ ಬಳಿ ಸತ್ಯ ಒಪ್ಪಿಕೊಂಡಿದ್ದಾಳೆ. ಬಳಿಕ ಆರೋಪಿ ಲತಾಳನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಧೀಶರು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ