ಚನ್ನಪಟ್ಟಣ: ಗೊಬ್ಬಳಿಮರ ಕತ್ತರಿಸಿದ ವಿಚಾರಕ್ಕೆ ಆರಂಭಗೊಂಡ ಜಗಳ ವಿಕೋಪಕ್ಕೆ ತೆರಳಿ ಇಟ್ಟಿಗೆಯಿಂದ ಬಡಿದು ವ್ಯಕ್ತಿಯೊರ್ವನನ್ನು ಕೊಲೆ ಮಾಡಿರುವ ಘಟನೆ ಯಲಿಯೂರು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಗ್ರಾಮದ ನಿವಾಸಿ ಈ.ರಾಜು(50) ಕೊಲೆಯಾಗಿರುವ ವ್ಯಕ್ತಿ. ಈತನನ್ನು ಅದೇ ಗ್ರಾಮದ ಸಿದ್ದಯ್ಯ ಎಂಬುವರ ಮಗ ಸಿದ್ದರಾಮು ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಸಿದ್ದರಾಮು ಭೂಮಿಯಲ್ಲಿದ್ದ ಗೊಬ್ಬಳಿಮರವನ್ನು ಕಡಿದಿರುವುದರ ಬಗ್ಗೆ ಪಾನಮತ್ತನಾದ ಈ ರಾಜು ತನಗೆ ಸೇರಿದ ಭೂಮಿಯಲ್ಲಿ ಗೊಬ್ಬಳಿ ಮರವನ್ನು ಕತ್ತರಿಸಿರುವುದರ ಬಗ್ಗೆ ತಗಾದೆ ತಗೆದು ಗಲಾಟೆ ನಡೆಯಿತ್ತೆಂದು ಹೇಳಲಾಗಿದ್ದು ಜಗಳ ವಿಕೋಪಕ್ಕೆ ತಿರುಗಿ ಇಬ್ಬರಿಗೂ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಸಿದ್ದರಾಮು ಕೈಗೆ ಸಿಕ್ಕ ಇಟ್ಟಿಗೆಯಿಂದ ಈ ರಾಜು ತಲೆಗೆ ಹೊಡೆದ ಪರಿಣಾಮ ತೀವ್ರವಾಗಿ ಗಂಭೀರ ಗಾಯಗೊಂಡ ಆತ ಸ್ಥಳದಲ್ಲೇ ಕುಸಿದು ಬಿದ್ದು ಸಾವನಪ್ಪಿದನೆಂದು ಹೇಳಲಾಗಿದೆ.
ಕೆಲ ತಿಂಗಳುಗಳಿಂದ ಎರಡು ಮನೆಯವರಿಗೂ ಗೊಬ್ಬಳಿಮರ ಕತ್ತರಿಸುವುದರ ಬಗ್ಗೆ ಆಗಾಗ್ಗೆ ಗಲಾಟೆ ನಡೆಯುತಿತ್ತು ಎಂದು ಹೇಳಲಾಗಿದ್ದು ಮಂಗಳವಾರ ಕೊಲೆಯೊಂದಿಗೆ ಅಂತ್ಯಗೊಂಡಿದೆ. ಘಟನಾ ಸ್ಥಳಕ್ಕೆ ತೆರಳಿದ ಗ್ರಾಮಾಂತರ ವೃತ್ತ ನಿರೀಕ್ಷಕ ನಾಗರಾಜು ಹಾಗೂ ಅಕ್ಕೂರು ಪೊಲೀಸ್ ಠಾಣೆಯ ಪಿ.ಎಸ್.ಐ.ಸದಾನಂದ ಮೃತದೇಹದ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು, ಕೊಲೆ ಮಾಡಿ ತಲೆ ತಪ್ಪಿಸಿಕೊಂಡಿದ್ದ ಆರೋಪಿ ಸಿದ್ದರಾಮನನ್ನು ಬಂಧಿಸಿದ್ದಾರೆ.
ಕೊಲೆಯ ಹಿಂದೆ ಗ್ರಾಮದ ಚುನಾಯಿತ ಸದಸ್ಯನೊಬ್ಬನ ಕೈವಾಡ ಇದೆ ಎಂದು ಕೊಲೆಯಾದ ಮೃತನ ಪುತ್ರ ಅಕ್ಕೂರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆಂದು ಹೇಳಲಾಗಿದೆ.