ಮಡಿಕೇರಿ: ಗೋಣಿಕೊಪ್ಪಲುವಿನ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿಗೆ ಸುದೀರ್ಘ 37 ವರ್ಷದ ನಂತರ ನೂತನ ಕಟ್ಟಡ ಲಭ್ಯವಾಗಿದ್ದು, ಈ ಕಟ್ಟಡದ ಭಜನಾ ಮಂದಿರವನ್ನು ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಭೋದಸ್ವರೂಪನಂದ ಮಹಾರಾಜ್ ಉದ್ಘಾಟಿಸಿದರು.
ನಗರದ ಗ್ರಾ.ಪಂ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ ಪಂಚಾಯಿತಿ ನೀಡಿರುವ ಖಾಲಿ ನಿವೇಶನದಲ್ಲಿ ದಾನಿಗಳ ಸಹಕಾರದಿಂದ ಭಜನಾ ಮಂದಿರವನ್ನು ನಿರ್ಮಿಸಲಾಗಿದ್ದು, ಚಿನ್ನ ಮತ್ತು ಬೆಳ್ಳಿ ವರ್ತಕರ ಸಂಘಕ್ಕೆ ಮಂಜೂರಾಗಿದ್ದ ಈ ಖಾಲಿ ನಿವೇಶನವನ್ನು ಉದಾರವಾಗಿ ಭಜನಾ ಮಂದಿರಕ್ಕೆ ಬಿಟ್ಟು ಕೊಟ್ಟು ಮೆಚ್ಚುಗೆ ಗಳಿಸಿರುವ ಚಿನ್ನ ಬೆಳ್ಳಿ ವರ್ತಕರ ಸಂಘದ ಆಡಳಿತ ಮಂಡಳಿಯನ್ನು ಸದಾ ಸ್ಮರಿಸುವ ಭಜನಾ ಮಂಡಳಿಯ ಆಡಳಿತ ಮಂಡಳಿ ನಿವೇಶನ ದೊರೆತ ಒಂದೇ ತಿಂಗಳಿನಲ್ಲಿ ಕಟ್ಟಡ ನಿರ್ಮಿಸಿ ಭಜನೆಗೆ ಅವಕಾಶ ಕಲ್ಪಿಸಿದ್ದಾರೆ.
ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷರಾದ ತೆಕ್ಕಡ ಲಕ್ಷ್ಮಣ್ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಭೋದಸ್ವರೂಪನಂದ ಮಹಾರಾಜ್ ಮಾತನಾಡಿ ಸಮಾಜದಲ್ಲಿ ಶಾಂತಿ ನೆಲೆಸಲು ಭಜನೆ ಅವಶ್ಯಕ. ಭಗವಂತನ ನಾಮಕೀರ್ತನೆ ಆರೋಗ್ಯಕರ ಬೆಳವಣಿಗೆಗೆ ಸಹಕಾರಿ ಎಂದರು.
ಭಜನಾ ಮಂಡಳಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷೆ ಕುಲ್ಲೇಟಿರ ಪ್ರವಿ ಮೊಣ್ಣಪ್ಪ ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಭಜನೆಗಳು, ದೇವರ ಸ್ಮರಣೆಗಳು ನಡೆಯುವಂತಾಗಬೇಕು. ಮನೆಯಲ್ಲಿಯೂ ಕೂಡ ಪೋಷಕರು ಮಕ್ಕಳಲ್ಲಿ ಭಜನೆಯ ಆಸಕ್ತಿ ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೆಕರ್, ಭಜನಾ ಮಂಡಳಿಯ ಪ್ರಮುಖರಾದ ಬಾಲಕೃಷ್ಣ ರೈ, ದಾನಿಗಳಾದ ಎಂ.ಜಿ.ಮೋಹನ್, ಕೆ.ರಾಮಚಾರ್, ಮಂದಿರ ನಿಮಾರ್ಣದ ಗುತ್ತಿಗೆದಾರ ಸಂತೋಷ್, ಭಜನಾ ಮಂಡಳಿಯ ಅಧ್ಯಕ್ಷ ಕೆ.ಲಕ್ಷ್ಮಣ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಆರಂಭದಲ್ಲಿ ಗಣಪತಿ ಹೋಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಉಪಾಧ್ಯಕ್ಷರಾದ ಚೇಂದಂಡ ಸುಮಿ ಸುಬ್ಬಯ್ಯ, ಕಾರ್ಯದರ್ಶಿ ಪ್ರಭಾಕರ್ ನೆಲ್ಲಿತ್ತಾಯ, ನಿರ್ದೇಶಕರಾದ ನಾರಾಯಣ ಸ್ವಾಮಿ ನಾಯ್ಡು, ಉದಯ್, ಪುರುಷೋತ್ತಮ್, ಡಾ. ಚಂದ್ರಶೇಖರ್, ಡಾ. ಶಿವಪ್ಪ, ಸೂರ್ಯ, ಎಂ.ಜಿ.ನಾರಾಯಣ್, ಚಿನ್ನ ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ಗಜಾನನಸೇಠ್, ದಾನಿಗಳಾದ ಅಜ್ಜಿಕುಟ್ಟಿರ ಸಜನ್, ಸಣ್ಣುವಂಡ ನಿರಜ್ ಕುಶಾಲಪ್ಪ, ರೇಖಾ ಶ್ರೀಧರ್ ಇನ್ನಿತರರು ಇದ್ದರು.