ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲೊಂದು ಅಪರೂಪದ ಘಟನೆ ನಡೆದಿದೆ. ಇಲ್ಲಿನ ಕುರಿಹೊಟ್ಟೆಯಲ್ಲಿ ಮಗುವನ್ನು ಹೋಲುವ ಮರಿಯೊಂದು ಜನಿಸಿದೆ. ಆದರೆ ಈ ಮರಿ ಹೊಟ್ಟೆಯಲ್ಲೇ ಸತ್ತಿದ್ದರಿಂದ ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದು ಸಂರಕ್ಷಿಸಿಡಲಾಗಿದೆ.
ನಾಗಮಂಗಲ ಪಟ್ಟಣದ ಟ್ಯಾಂಕ್ ಮೈದಾನದ ಸಮೀಪವಿರುವ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಈ ಅಪರೂಪದ ಕುರಿಮರಿ ಸಿಕ್ಕಿದೆ. ಕಳೆದ ಗುರುವಾರ ರೈತನೊಬ್ಬ ಕರೆತಂದಿದ್ದ ತೆನೆ ಕುರಿಗೆ ಡಾ.ಶಾಂತರಾಜು ಮತ್ತು ಡಾ. ಬಿಷುಜಮೂರ್ತಿ ಅವರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬಳಿಕ ಹೊಟ್ಟೆಯಲ್ಲೇ ಸತ್ತು ಹೋಗಿದ್ದ ಮರಿಯನ್ನು ಹೊರತೆಗೆದಾಗ ಕುರಿಮರಿ ಮನುಷ್ಯ ರೂಪದ ಮಗುವಿನಂತೆ ಮುಖ, ದೇಹ ರಚನೆ, ಕೈಗಳನ್ನು ಹೊಂದಿತ್ತು. ಇದನ್ನು ನೋಡಿದ ವೈದ್ಯರು ಸೇರಿದಂತೆ ಇಡೀ ಸಿಬ್ಬಂದಿಯೇ ಬೆಚ್ಚಿಬಿದ್ದಿದ್ದಾರೆ.
ಜನಿಟಿಕ್ ತೊಂದರೆಯಿಂದಾಗಿ ಲಕ್ಷಕ್ಕೊಂದು ಈ ರೀತಿಯ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತವೆ ಎಂದು ಮಗುವಿನ ರೂಪ ಹೋಲುವ ಪ್ರಕರಣದ ಬಗ್ಗೆ ಪಶು ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಡಾ.ಶಾಂತರಾಜು ತಿಳಿಸಿದ್ದಾರೆ.