ಕೆ.ಆರ್.ಪೇಟೆ: ಮಂಡ್ಯ ಜಿಲ್ಲೆಯಲ್ಲಿ ರೈತರು ಮೇಲಿಂದ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದೀಗ ಸಾಲದ ಬಾಧೆ ತಾಳಲಾರದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಮಚಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿವರಾಮೇಗೌಡ (55) ಆತ್ಮಹತ್ಯೆ ಮಾಡಿಕೊಂಡ ರೈತ. ಈತ ಸಾಲ ಬಾಧೆ ತಾಳಲಾರದೆ ಮೂರು ದಿನಗಳ ಹಿಂದೆ ತಮ್ಮ ಜಮೀನಿನ ಬಳಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ತಕ್ಷಣ ಶ್ರವಣಬೆಳಗೊಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಬೇಸಾಯ ಮಾಡುವ ಉದ್ದೇಶದಿಂದ ಅಘಲಯ ಎಸ್ಬಿಎಂ ಬ್ಯಾಂಕಿನಲ್ಲಿ 70 ಸಾವಿರ ರೂ. ಸಾಲ ಜೊತೆಗೆ ಕೈ ಸಾಲವಾಗಿ 3 ಲಕ್ಷ ರೂ. ಸಾಲ ಮಾಡಿದ್ದರು.
ಈ ನಡುವೆ ಸಾಲ ಮಾಡಿ ಕೊರೆಸಿದ್ದ ಬೋರ್ವೆಲ್ ಗಳು ವಿಫಲವಾದ ಕಾರಣ ಸಾಲದ ಬಾಧೆ ಜಾಸ್ತಿಯಾಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.