ಮಂಡ್ಯ: ಕಳೆದ ಆರು ತಿಂಗಳಿನಿಂದ ರೈತರ ಸಾಕು ಪ್ರಾಣಿಗಳನ್ನು ತಿಂದು ಕೊಬ್ಬಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿ ಕಾಳೇನಹಳ್ಳಿ ಗ್ರಾಮದ ಕಿರಣ್ ಅವರ ತೋಟದ ಮನೆಯ ಬಳಿ ಚಿರತೆ ಬೋನಿಗೆ ಸೆರೆ ಸಿಕ್ಕಿದ್ದು ಅದನ್ನು ಮೈಸೂರಿನ ಮೃಗಾಲಯಕ್ಕೆ ಕೊಂಡೊಯ್ಯಲಾಗಿದೆ. ಈ ಚಿರತೆಯು ರೈತರಲ್ಲಿ ಭಯ ಹುಟ್ಟಿಸಿತ್ತು. ಆರೇಳು ತಿಂಗಳಿನಿಂದ ಈ ಭಾಗದಲ್ಲಿ ರೈತರ ಸಾಕು ಪ್ರಾಣಿಗಳಾದ ಹಸು, ಎಮ್ಮೆ, ನಾಯಿ, ಕುರಿ, ಮೇಕೆ ಮತ್ತಿತರರ ಪ್ರಾಣಿಗಳನ್ನು ತಿಂದು ಹಾಕುವ ಮೂಲಕ ರೈತರು ಭಯಪಡುವಂತ ವಾತಾವರಣ ಸೃಷ್ಟಿ ಮಾಡಿತ್ತು.
ಕಳೆದ ವಾರ ಕಿರಣ್ ಅವರ ಮನೆ ಬಳಿ ಚಿರತೆಯು ಸುಳಿದಾಡಿರುವ ಹೆಜ್ಜೆ ಗುರುತುಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಿರಣ್ ಅವರು ಅರಣ್ಯ ಇಲಾಖೆಗೆ ದೂರು ನೀಡಿ ಚಿರತೆಯನ್ನು ಹಿಡಿಯುವಂತೆ ಲಿಖಿತ ಮನವಿ ಮಾಡಿದ್ದರು.
ಅದರಂತೆ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಐದು ದಿನಗಳ ಹಿಂದೆ ಕಾಳೇನಹಳ್ಳಿ ಬಳಿ ಬೋನಿಟ್ಟು ಕಾರ್ಯಾಚರಣೆ ನಡೆಸಿದ್ದರು. ಇದೀಗ ಸೆರೆ ಸಿಕ್ಕಿರುವ ಚಿರತೆಗೆ ಮೈಸೂರು ಮೃಗಾಲಯಕ್ಕೆ ಚಿಕಿತ್ಸೆ ನೀಡಿ ಬಳಿಕ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದೆಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.