ಮಡಿಕೇರಿ: ವಿರಾಜಪೇಟೆ ಬಳಿಯ ಬೆಳ್ಳುಮಾಡು ಗ್ರಾಮದ ಎನ್.ಪಿ.ಮಂಜೇಶ್ ಮಂದಣ್ಣ ಅವರಿಗೆ 59ನೇ ರಾಷ್ಟ್ರೀಯ ರೈಫಲ್ ಶೂಟಿಂಗ್ ನಲ್ಲಿ 598.3 ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ದೆಹಲಿಯಲ್ಲಿ ಇತ್ತೀಚಿಗೆ ಜರುಗಿದ ರಾಷ್ಟ್ರೀಯ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಂಜೇಶ್ ಮಂದಣ್ಣ, ಅತ್ಯುತ್ತಮ ಗುರಿಯೊಂದಿಗೆ ಮುಂದಿನ 3 ವರ್ಷ 9ತಿಂಗಳವರೆಗೂ ರಾಷ್ಟ್ರೀಯ ರೈಫಲ್ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ. ಅಂತೆಯೇ ಮಂಜೇಶ್ ಮಂದಣ್ಣ ಅವರಿಗೆ ರಿನೋವಡ್ ಶಾಟ್ ಎಂಬ ಗೌರವವೂ ದೊರಕಿದೆ.
ಈಗಾಗಲೇ ರೈಫಲ್ ಶೂಟಿಂಗ್ ಕ್ರೀಡೆಯಲ್ಲಿ 8 ಚಿನ್ನ, 3 ಬೆಳ್ಳಿ, 2 ಕಂಚಿನ ಪದಕ ಗಳಿಸಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಅನೇಕ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಇವರು ವಿರಾಜಪೇಟೆ ಬಳಿಯ ಬೆಳ್ಳುಮಾಡು ಗ್ರಾಮದ ಪಂದಿಯಂಡ ನವೀನಾ ವಿಟ್ಲ ದಂಪತಿ ಪುತ್ರರಾಗಿದ್ದು, ಮೈಸೂರಿನ ಜೆಸಿಇ ಕಾಲೇಜಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.