ಹುಣಸೂರು: ರೈತ ಕಷ್ಟಪಟ್ಟು ಬೆಳೆದ ಅವರೆಕಾಯಿಗೆ ಹೇಳಿಕೊಳ್ಳುವಂತಹ ಬೆಲೆ ಸಿಕ್ಕಿಲ್ಲ. ಮಾರುಕಟ್ಟೆಯಲ್ಲಿ 20 ರಿಂದ 30ರೂ.ವರೆಗೆ ಮಾರಾಟವಾಗುತ್ತಿದೆಯಾದರೂ ರೈತರಿಗೆ ಹೆಚ್ಚಿನ ಬೆಲೆ ದೊರೆಯುತ್ತಿಲ್ಲ.
ಇಳುವರಿ ವಿಚಾರದಲ್ಲಿ ರೈತ ನೆಮ್ಮದಿ ಪಡುವಂತಾಗಿದೆ. ಈ ಬಾರಿ ಉತ್ತಮ ಹಿಂಗಾರು ಮಳೆ ಸುರಿದಿದ್ದರಿಂದ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಫಸಲು ಬಂದಿರುವುದು ರೈತರ ಮುಖದಲ್ಲಿ ಸಂತಸ ಮೂಡಿಸಿದೆ. ಹುಣಸೂರು, ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಅವರೆಕಾಯಿಯನ್ನು ಬೆಳೆದಿದ್ದು ಪ್ರತಿದಿನ ಟನ್ ಗಟ್ಟಲೆ ಅವರೆಕಾಯಿ ಮಾರಾಟಕ್ಕೆ ಬರುತ್ತಿದ್ದು, ರೈತರಿಗೆ ಸರಾಸರಿ ಕೆಜಿಯೊಂದಕ್ಕೆ 15 ರೂ.ನಷ್ಟು ಸಿಗುತ್ತದೆ. ರೈತರು ಪಡುವ ಶ್ರಮ ಮತ್ತು ಮಾಡಿದ ಖರ್ಚಿಗೆ ಇದರಲ್ಲೇನು ಅಂತಹ ಲಾಭ ಸಿಗುತ್ತಿಲ್ಲ. ಆದರೂ ಇಷ್ಟಾದರೂ ಸಿಗುತ್ತಿದೆ ಎಂಬ ಸಮಾಧಾನ ರೈತರದಾಗಿದೆ.
ಹುಣಸೂರು ವ್ಯಾಪ್ತಿಯಲ್ಲಿ ಬೆಳೆಯುವ ಅವರೆಕಾಯಿಯನ್ನು ವ್ಯಾಪಾರಿಗಳು ಖರೀದಿಸಿ ಬೆಂಗಳೂರು, ದೊಡ್ಡಬಳ್ಳಾಪುರ, ಮಂಗಳೂರು, ಬಾಂಬೆ, ಚೆನೈ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ಹುಣಸೂರು ಬಳಿ ಮೈಸೂರು ರಸ್ತೆಯಲ್ಲಿರುವ ಪುಟ್ಟ ಗ್ರಾಮ ಬನ್ನಿಕುಪ್ಪೆಯಲ್ಲಿ ಅವರೆಕಾಯಿ ಮಾರಾಟ ದಿನನಿತ್ಯ ಬಲು ಜೋರಾಗಿಯೇ ನಡೆಯುತ್ತಿದೆ. ಇಲ್ಲಿಂದಲೇ ದೂರದ ಊರಿಗೆ ಅವರೆಕಾಯಿಯನ್ನು ಕಳುಹಿಸಿಕೊಡಲಾಗುತ್ತಿದೆ.
ಹುಣಸೂರು ತಾಲೂಕುವೊಂದರಲ್ಲೇ ದಿನಕ್ಕೆ 50 ರಿಂದ 60 ಟನ್ ಅವರೆಕಾಯಿ ಮಾರಾಟವಾಗುತ್ತಿದೆಯಂತೆ. ಬನ್ನಿಕುಪ್ಪೆ ಮುಖ್ಯರಸ್ತೆಯಲ್ಲಿ 30 ಟನ್, ಎಪಿಎಂಸಿಯಲ್ಲಿ 11 ಟನ್, ಕೋರ್ಟ್ ಸರ್ಕಲ್ ಬಳಿ 10 ಟನ್, ಗ್ರಾಮೀಣ ಪ್ರದೇಶದ ಹೋಬಳಿ ಕೇಂದ್ರಗಳಲ್ಲಿ ಸುಮಾರು 10 ರಿಂದ 15 ಟನ್, ಸರಾಸರಿ ಮಾರಾಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸಂಕ್ರಾಂತಿ ಹಬ್ಬ ಬಂದಿದ್ದರಿಂದ ಒಂದಷ್ಟು ಬೇಡಿಕೆಯೂ ಹೆಚ್ಚಾಗಿದೆ. ಹುಣಸೂರು ತಾಲೂಕಿನಾದ್ಯಂತ ಈ ಬಾರಿ 11,710 ಹೆಕ್ಟೇರ್ ಪ್ರದೇಶದಲ್ಲಿ ಅವರೆಕಾಯಿಯನ್ನು ಬೆಳೆಯಲಾಗಿದೆ. ಕೆಲವೆಡೆ ಮಳೆಗೆ ಗಿಡ ಹುಲುಸಾಗಿ ಬೆಳೆದಿದ್ದರೂ ಹೂಬಿಟ್ಟು ಮಿಡಿಕಚ್ಚದ ಕಾರಣ ರೈತರಿಗೆ ನಷ್ಟವಾಗಿದೆ.
ಈ ಬಾರಿ ಎಲ್ಲ ಕಡೆಯೂ ಅವರೆಕಾಯಿಯನ್ನು ಬೆಳೆದಿದ್ದರಿಂದ ಮತ್ತು ಮಾರುಕಟ್ಟೆಗೆ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅವರೆಕಾಯಿ ಬರುತ್ತಿರುವುದರಿಂದ ಬೆಲೆ ಹೆಚ್ಚಾಗುವ ಸಾಧ್ಯತೆ ಕಡಿಮೆ ಇರುವುದಾಗಿ ಮಾರಾಟಗಾರರು ಹೇಳುತ್ತಿದ್ದಾರೆ. ಬೆಲೆ ಹೆಚ್ಚಳವಾದರೆ ಒಂದಷ್ಟು ಆದಾಯ ಬರಬಹುದು ಎಂಬುದು ರೈತರ ನಿರೀಕ್ಷೆಯಾಗಿದೆ.