ಚಾಮರಾಜನಗರ: ಕಾಡಂಚಿನ ಜಮೀನಿನಲ್ಲಿ ಹುರಳಿ ಒಕ್ಕಣೆ ಮಾಡುತ್ತಿದ್ದ ರೈತ ದಂಪತಿಗಳ ಮೇಲೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದ ಪರಿಣಾಮ ದಂಪತಿಗಳು ಗಾಯಗೊಂಡ ಘಟನೆ ನಡೆದಿದೆ.
ತಾಲೂಕಿನ ಕಾಡಂಚಿನ ಯರಗನಹಳ್ಳಿ ಗ್ರಾಮದ ಜಮೀನಿನಲ್ಲಿ ಪುಟ್ಟಶೆಟ್ಟಿ ಮತ್ತು ಪತ್ನಿ ಗೌರಮ್ಮ ಹುರಳಿ ಒಕ್ಕಣೆ ಮಾಡುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಕಾಡಾನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ರೈತ ದಂಪತಿಗಳ ಕಿರುಚಾಟ ಕೇಳಿಸಿಕೊಂಡು ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಕೂಡಲೇ ಗಾಯಾಳುಗಳನ್ನ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈದ್ಯರ ಸಕಾಲಿಕ ಚಿಕಿತ್ಸೆಯಿಂದ ರೈತ ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಲ್ಲದೇ ಯರಗನಹಳ್ಳಿ ಗ್ರಾಮದ ಸುತ್ತಮುತ್ತಲ ಜಮೀನಿನಲ್ಲಿ ಅಪಾರ ಪ್ರಮಾಣದ ಬೆಳೆ ಕೂಡ ನಷ್ಟವಾಗಿದ್ದು, ಕಾಡುಪ್ರಾಣಿಗಳಿಂದ ಪದೇ-ಪದೇ ರೀತಿಯ ಘಟನೆಗಳು ಸಂಭವಿಸುತ್ತಿದ್ದರೂ ಸಹ ಅರಣ್ಯಾಧಿಕಾರಿಗಳು ಕಾಡುಪ್ರಾಣಿಗಳ ಹಾವಳಿ ತಪ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.