ಮಡಿಕೇರಿ: ಕೊಡಗಿನಲ್ಲಿ ಕಾಡಾನೆ ಹಾವಳಿ ಅಲ್ಲಲ್ಲಿ ಕಾಣಿಸಿಕೊಂಡಿರುವುದರಿಂದ ಜನ ಭಯಭೀತರಾಗಿದ್ದಾರೆ.
ಇದೀಗ ಕಾಫಿ ಕೊಯ್ಲು ಆರಂಭವಾಗಿರುವುದರಿಂದ ಕಾರ್ಮಿಕರು ತೋಟಕ್ಕೆ ತೆರಳಲು ಭಯಪಡುವಂತಾಗಿದೆ. ಮಡಿಕೇರಿ ಬಳೀಯ ಸುಂಟಿಕೊಪ್ಪ ವ್ಯಾಪ್ತಿಯ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ಪೆಮ್ಮಯ್ಯ ಎಂಬವರ ಮನೆ ಹಿತ್ತಲಿನ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ, ತೆಂಗು, ಪಪ್ಪಾಯಿಯನ್ನು ತಿಂದು ತುಳಿದು ಧ್ವಂಸಗೊಳಿಸಿದ್ದು ಇದರಿಂದ ಅವರಿಗೆ ಸಾವಿರಾರು ರೂ ನಷ್ಟ ಉಂಟಾಗಿದೆ.
ಕಾವೇರಿ ಬಡಾವಣೆಯ ಸುತ್ತ-ಮುತ್ತಲಿನಲ್ಲಿ ಹತ್ತಾರು ವಾಸದ ಮನೆಗಳನ್ನು ನಿರ್ಮಿಸಿಕೊಂಡು ನೆಲೆಸಿದ್ದಾರೆ ಹಾಗೂ ರಾಜ್ಯ ಹೆದ್ದಾರಿಯು ಹಾದು ಹೋಗಿರುವ ಜನವಸತಿ ಪ್ರದೇಶದ ಅಂಚಿಗೆ ಆಗಮಿಸಿರುವ ಕಾಡಾನೆಯು ಕೃಷಿ ಫಸಲನ್ನು ತಿಂದಿರುವುದು ಅಕ್ಕ ಪಕ್ಕದ ನಿವಾಸಿಗಳಲ್ಲಿ ಭಯದ ವಾತವರಣ ಸೃಷ್ಟಿಸಿದೆ.
ಯಾವಾಗ ಬೇಕಾದರೂ ಕಾಡಾನೆಗಳು ನಾಡಿಗೆ ಬರುವ ಸಾಧ್ಯತೆಗಳು ಇರುವುದರಿಂದ ಜನರಲ್ಲಿ ಭಯ ಆವರಿಸಿದೆ. ಕಾಡಾನೆಗಳು ಕಾಡಿನಿಂದ ನಾಡಿನತ್ತ ಬರುವುದನ್ನು ತಪ್ಪಿಸಲು ಅರಣ್ಯ ಇಲಾಖೆ ಪರ್ಯಾಯ ಕ್ರಮ ಕೈಗೊಳ್ಳುವ ಅಗತ್ಯವಿದೆ.