ಮಡಿಕೇರಿ: ಮುಂದೆ ನಡೆಯಲಿರುವ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳಿಸುವ ವಿಶ್ವಾಸವನ್ನು ರಾಜ್ಯ ನಗರಾಭಿವೃದ್ದಿ ಸಚಿವ ವಿನಯ್ಕುಮಾರ್ ಸೊರಕೆ ವ್ಯಕ್ತಪಡಿಸಿದರು.
ಉಡುಪಿಯಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಕೆಲ ಕಾಲ ವಿಶ್ರಾಂತಿ ಪಡೆಯಲು ಮಡಿಕೇರಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಜಿ.ಪಂ. ಹಾಗೂ ತಾ.ಪಂ ಚುನಾವಣೆಯನ್ನು ಕೊಡಗು ಜಿಲ್ಲೆಯಲ್ಲಿ ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಪಕ್ಷ ಸರ್ವ ಸನ್ನದ್ಧವಾಗಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಗ್ರಾಮಾಂತರ ಪ್ರದೇಶಗಳಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆಂದರು.
ರಾಜ್ಯದಲ್ಲಿ ನಮ್ಮದೆ ಆಡಳಿತ ಸರಕಾರವಿರುವುದರಿಂದ ಗೆಲುವು ಸುಲಭ ಸಾಧ್ಯ ಎಂದ ಅವರು, ನಮ್ಮ ಸರಕಾರ ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿದ್ದು, ಜಿಲ್ಲೆಯ ಕೆಲವಡೆಗಳಲ್ಲಿ ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಮುಖ್ಯ ಮಂತ್ರಿಯವರಿಗೆ ಕೊಡಗಿನ ಮೇಲೆ ವಿಶೇಷವಾದ ಅಭಿಮಾನವಿರುವುದರಿಂದ ಮುಂದಿನ ಸಾಲಿನ ಬಜೆಟ್ನಲ್ಲಿ ಇನ್ನಷ್ಟು ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಲಿದ್ದಾರೆ ಎಂಬುದಾಗಿ ಹೇಳಿದರು.
ಈಗಾಗಲೇ ಸರಕಾರ ನೀಡಿರುವ ಸರಕಾರದ ಕಾರ್ಯಕ್ರಮಗಳನ್ನು ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಗ್ರಾಮಾಂತರ ಪ್ರದೇಶಗಳ ಜನರಿಗೆ ತಲುಪಿಸುವ ಮೂಲಕ ಜಿ.ಪಂ ಹಾಗೂ ತಾ.ಪಂ ಚುನಾವಣೆಯಲ್ಲಿ ಪಕ್ಷದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ಎಂಬ ದೃಢ ವಿಶ್ವಾಸವಿದೆ ಎಂಬ ಅಭಿಪ್ರಾಯ ಪಟ್ಟರು.
ಮಡಿಕೇರಿ ನಗರದ ನಾಗರಿಕರಿಗೆ ಕೊರತೆಯಿಲ್ಲದಂತೆ ಕುಡಿಯುವ ನೀರಿನ ಸರಬರಾಜು ಮಾಡಲು ಅನುಕೂಲವಾಗುವಂತೆ ಈ ಮೊದಲೇ ಉದ್ದೇಶಿಸಿದ ಬೇತ್ರಿ ಯೋಜನೆಯನ್ನು ಅತೀ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುತ್ತದೆ ಎಂಬುದಾಗಿ ಸಚಿವರು ತಿಳಿಸಿದರು.
ಕೇಂದ್ರದ ಅಮೃತ ಯೋಜನೆಯಡಿ ಎರಡು ಸರಕಾರಗಳ ಸಹಭಾಗಿತ್ವದಲ್ಲಿ ಬೇತ್ರಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದ ಅವರು, ಕೇಂದ್ರ ಸರಕಾರದಿಂದ 50 ಕೋಟಿ ಹಾಗೂ ರಾಜ್ಯ ಸರಕಾರದಿಂದ 50 ಕೋಟಿ ರೂ.ಗಳ ಈ ಯೋಜನೆಯನ್ನು ಅತೀ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂಬ ಮಾಹಿತಿ ನೀಡಿದರು.