ನಂಜನಗೂಡು: ಗುರು ಇಲ್ಲದೇ ಗುರಿ ಸಾಧಿಸಲು ಸಾಧ್ಯವಿಲ್ಲ, ಇಂದಿನ ಗುರುವರ್ಯರು ಮತ್ತು ಮಠ-ಮಾನ್ಯಗಳಿಂದ ಸಮಾಜದಲ್ಲಿ ಅಭಿವೃದ್ದಿ ಕಾಣುವುದರ ಜೊತೆಗೆ ನೆಮ್ಮದಿ, ಶಾಂತಿಯನ್ನು ಕಾಣಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಅವರು ತಾಲೂಕಿನ ಹುಲ್ಲಹಳ್ಳಿ ಸಮೀಪವಿರುವ ಶ್ರೀ ಸದ್ಗುರು ಮಹಾದೇವ ತಾತಾರವರ 28 ನೇ ಪ್ರಮಥ ಗಣಾರಾಧನೆ ಹಾಗೂ ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಹದೇವ ತಾತಾ ಭವನದ ಉದ್ಘಾಟನೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ದುಡಿಮೆ, ಪರಿಶ್ರಮದಿಂದ ಗುರಿ ಮುಟ್ಟಲು ಸಾಧ್ಯವಾಗಿದ್ದು, ಹುಟ್ಟುವಾಗ ಉಸಿರು, ಸತ್ತಾಗ ಹೆಸರು ಬರುವಂತೆ ನಡೆದುಕೊಳ್ಳಬೇಕು ಎಲ್ಲರೂ ಕಾಯಕ ಮಾಡಬೇಕು, ಕಾಯಕ ಮಾಡದೇ ಯಾರೂ ಬದುಕಲು ಸಾಧ್ಯವಿಲ್ಲ ಎಂಬುದು ಪವಾಡ ಪುರುಷ ಮಹದೇವ ತಾತಾರವರ ಸಂದೇಶವಾಗಿತ್ತು, ಸ್ವತಃ ಕಬ್ಬಿಣದ ನೇಗಿಲು ಹಿಡಿದು ಉಳುಮೆ ಮಾಡುತ್ತಿದ್ದ ಮಹದೇವತಾತಾರವರ ಕಾಯಕ ನಿಷ್ಠೆ ಸರ್ವರಿಗೂ ಮಾದರಿಯಾಗಿದ್ದು, ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದರು. ತಮ್ಮ ಪವಾಡಗಳಿಂದ ಭಕ್ತರ ಸಂಕಷ್ಟಗಳನ್ನು ದೂರ ಮಾಡುತ್ತಿದ್ದ, ನಿರಾಧಾರಿ ಸರ್ವ ಸಂಗ ಪರಿತ್ಯಾಗಿಯಾಗಿರುವ ಮಹದೇವತಾತಾರವರನ್ನು ಪ್ರತಿಯೊಬ್ಬರೂ ಸ್ಮರಿಸಿಕೊಳ್ಳಬೇಕಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ ಉತ್ತರ ಕರ್ನಾಟಕದ ಬಿಜಾಪುರದಲ್ಲಿ ಕೂಡಲ ಸಂಗಮ ಇರುವಂತೆ ಈ ಭಾಗದಲ್ಲಿ ಕಪಿಲಾ ನದಿಯ ಪವಿತ್ರ ಮಹದೇವತಾರವರ ಸಂಗಮ ಕ್ಷೇತ್ರ ಎಂದ ಅವರು, ಉಗ್ರಗಾಮಿಗಳಿಗೆ ಹಿಂಸೆಗೆ ಕಡಿವಾಣ ಹಾಕಬೇಕೆಂದರೆ ಧಾರ್ಮಿಕ ಕೇಂದ್ರಗಳಿಂದ ಮಾತ್ರ ಸಾಧ್ಯ ಎಂದರು.
ಸಚಿವ ಡಾ. ಶ್ಯಾಮನೂರು ಶಿವಶಂಕರಪ್ಪ ಮಾತನಾಡಿ ನಾನು ಮಹದೇವ ತಾತಾರವರ ಸದ್ಭಕ್ತ, ಹೂವಿನ ಹಡಗಲಿಯಲ್ಲಿರುವ ಮಹದೇವ ತಾತಾರವರ ಗದ್ದಿಗೆಗೆ ಭೇಟಿ ನೀಡಿ ದರ್ಶನ ಪಡೆದಿದ್ದೆ, ಅಲ್ಲಿನ ಭಕ್ತರೊಬ್ಬರು ಐಕ್ಯ ಸ್ಥಳವಾದ ಈ ಸಂಗಮ ಕ್ಷೇತ್ರಕ್ಕೆ ಭೇಟಿ ಕೊಡಲು ತಿಳಿಸಿದರು. ಅಂದು ನಾನು ದರ್ಶನ ಪಡೆದು ಸುತ್ತೂರು ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಇಲ್ಲೊಂದು ಸುಂದರವಾದ ಭವನ ಹಾಗೂ ವಸತಿ ಗೃಹ ನಿರ್ಮಾಣ ಮಾಡಲು ತಾತಾರವರ ಪ್ರೇರೇಪಣೆಯಾಗಿತ್ತು, ಅದರಂತೆ ನಿರ್ಮಾಣಗೊಂಡು ಉದ್ಘಾಟನೆಯಾಗಿದೆ ಎಂದರು.
ಸಚಿವ ಮಹದೇವ ಪ್ರಸಾದ್, ಸಂಸದ ಆರ್. ಧ್ರುವನಾರಾಯಣ್, ಶಾಸಕ ಜಿ.ಟಿ ದೇವೇಗೌಡ, ಮಾಜಿ ಸಚಿವ ಕೋಟೆ ಶಿವಣ್ಣ ಇದ್ದರು. ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.