ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ನಡೆಯುತ್ತಿರುವ ಸಿದ್ದಪ್ಪಾಜಿ ಜಾತ್ರೆಯಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಸಂಪೂರ್ಣವಾಗಿ ಪ್ರಾಣಿ ಬಲಿಯನ್ನು ತಡೆಯಲಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ಕುಮಾರ್ ಆರ್.ಜೈನ್ ನಿರ್ದೇಶನದಂತೆ ಚಿಕ್ಕಲ್ಲೂರಿಗೆ ಹೋಗುವ ಪ್ರತಿಯೊಂದು ವಾಹನವನ್ನು ಪರಿಶೀಲಿಸುವ ಕಾರ್ಯಕ್ಕೆ ಮುಂದಾಗಿ, ವಾಹನದಲ್ಲಿ ಸಾಗಿಸುತ್ತಿದ್ದ ಕುರಿ ಕೋಳಿಯನ್ನು ಜಪ್ತಿಪಡಿಸಿಕೊಳ್ಳಲಾಗಿದೆ.
ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಗೆ ಲಕ್ಷಾಂತರ ಭಕ್ತರ ಆಗಮಿಸಿ, ದೇವಾಲಯದ ಬಳಿಯೇ ಪ್ರಾಣಿ ಬಲಿಕೊಟ್ಟಿ, ಸಹಪಂಕ್ತಿ ಭೋಜನ ಮಾಡುವ ಪದ್ದತಿ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿತ್ತು. ಅದರಂತೆ ಈ ಭಾರಿಯೂ ಇಲ್ಲಿ ಸಹ ಪಂಕ್ತಿ ಭೋಜನ ಮತ್ತು ಪ್ರಾಣಿ ಬಲಿಗೆ ಕುರಿ ಕೋಳಿ ವಾಹನದಲ್ಲಿ ಸಾಗಿಸುತ್ತಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ಪ್ರಾಣಿಗಳನ್ನು ಜಪ್ತಿ ಪಡಿಸಿಕೊಂಡು ಜಾತ್ರೆಗೆ ಜನರನ್ನು ಮಾತ್ರ ಕಳುಹಿಸುತ್ತಿದ್ದಾರೆ.
ಒಂದು ಹಂತದಲ್ಲಿ ವಾಹನ ತಪಾಸಣೆ ಮತ್ತು ಪ್ರಾಣಿಗಳ ಜಪ್ತಿ ಸಮಯದಲ್ಲಿ ಪೊಲೀಸ್ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸುಪ್ರೀಂ ಕೋರ್ಟ್ ನಿಂದ ಪ್ರಾಣಿ ಬಲಿ ತಡೆಯಲು ನಿರ್ದೇಶನ ಹಾಗೂ ಮಾನವ ಹಕ್ಕು ಆಯೋಗದಿಂದಲೂ ಬಂದಿರುವ ನೊಟೀಸ್ನ ಪರಿಣಾಮ ಜಿಲ್ಲಾಡಳಿತ ಕಟು ನಿರ್ಧಾರ ಕೈಗೊಂಡಿದೆ.
ಈ ನಡುವೆ ಪ್ರಾಣಿಬಲಿ ನಿಷೇಧ ಸಂಬಂಧ ಕ್ರಮ ಕೈಗೊಳ್ಳುವ ಸಲುವಾಗಿ ಉಪವಿಭಾಗ ಅಧಿಕಾರಿ ಹಾಗೂ ಕೊಳ್ಳೇಗಾಲ ತಹಸೀಲ್ದಾರ್ ಅವರೊಂದಿಗೆ ಕೊಳ್ಳೇಗಾಲದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ (ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ)ದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಹಳೇ ಮಠದ ಸುತ್ತಮುತ್ತಲ ಪ್ರದೇಶಕ್ಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಸಿದ್ದಪ್ಪಾಜಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶಕ್ಕೆ, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕೊತ್ತನೂರು, ಸುಂಡಳ್ಳಿ ಗ್ರಾಮಗಳ ಸುತ್ತಮುತ್ತಲ ಪ್ರದೇಶಕ್ಕೆ ಕೊಳ್ಳೇಗಾಲ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ರಾಚಪ್ಪಾಜಿ ನಗರದ ಸುತ್ತಮುತ್ತಲ ಪ್ರದೇಶಕ್ಕೆ ಕೊಳ್ಳೇಗಾಲ ನಗರ ಸಭೆ ಪೌರಾಯುಕ್ತರು, ಬಂಡಳ್ಳಿ ರಸ್ತೆ ಮಾರ್ಗದ ಸುತ್ತಮುತ್ತಲ ಪ್ರದೇಶಗಳ ವ್ಯಾಪ್ತಿಗೆ ಕೊಳ್ಳೇಗಾಲ ತಾಲೂಕು ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕರನ್ನು ನಿಯೋಜಿಸಲಾಗಿದೆ. ಒಟ್ಟಾರೆ ಜಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿ ಬಲಿ ನಡೆಯದಂತೆ ತಡೆ ಹಿಡಿಯಲಾಗಿದ.