ಮಡಿಕೇರಿ: ಕೊಡಗಿನಲ್ಲಿ ಬೇಸಿಗೆಯ ದಿನಗಳನ್ನು ಕ್ರೀಡಾದಿನಗಳು ಎಂದು ಕರೆದರೆ ತಪ್ಪಾಗಲಾರದು. ಏಕೆಂದರೆ ಈ ಸಮಯದಲ್ಲಿ ಜಿಲ್ಲೆಯಾದ್ಯಂತ ಏನಾದರೊಂದು ಕ್ರೀಡಾಕೂಟಗಳು ನಡೆಯುತ್ತಲೇ ಇರುತ್ತವೆ.
ಬೇಸಿಗೆಯ ದಿನವಾದ್ದರಿಂದ ಅಷ್ಟೊಂದು ತೋಟದ ಕೆಲಸಗಳು ಇರುವುದಿಲ್ಲ ಹೀಗಾಗಿ ತಮ್ಮನ್ನ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಯ ಕಳೆಯುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಕೊಡವ ಕೌಟುಂಬಿಕ ಹಾಕಿ ಆರಂಭವಾದ ನಂತರ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಎಲ್ಲೆಡೆ ಕ್ರೀಡಾ ಸಂಭ್ರಮ ಕಂಡು ಬರಲಾರಂಭಿಸಿತು.
ಒಂದೆಡೆ ಕೊಡವ ಹಾಕಿ, ಮತ್ತೊಂದೆ ಕೊಡವ ಕ್ರಿಕೆಟ್, ಇದರ ನಡುವೆ ಇತರ ಸಮುದಾಯದವರು ತಮ್ಮ ಸಮುದಾಯದ, ಕುಟುಂಬದ ಹೆಸರುಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸ ತೊಡಗಿರುವುದು ನಿಜಕ್ಕೂ ಸಂತಸದ ಸಂಗತಿ.
ಈ ಕ್ರೀಡಾಕೂಟಗಳಿಂದ ಸಮುದಾಯದವರು, ಕುಟುಂಬಸ್ಥರು ಒಂದೆಡೆ ಸೇರಲು ಅವಕಾಶವಾಗಿದೆ. ಇಲ್ಲಿ ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯವಾಗಿ ಕಂಡು ಬರುತ್ತಿದೆ. ಈಗಾಗಲೇ ಏಪ್ರಿಲ್ ನಿಂದ ಆರಂಭವಾಗಲಿರುವ ಕೊಡವ ಕೌಟುಂಬಿಕ ಹಾಕಿ ಶಾಂತೆಯಂಡ ಕಪ್ ಗೆ ಮೈದಾನವನ್ನು ಸಜ್ಜುಗೊಳಿಸುವ ಕಾರ್ಯ ಮಡಿಕೇರಿಯಲ್ಲಿ ಆರಂಭವಾಗಿದೆ. ಪ್ರತಿ ವರ್ಷ ಎಲ್ಲಿ ಪಂದ್ಯಾವಳಿಯನ್ನು ನಡೆಸಲಾಗುತ್ತದೆಯೋ ಆ ಊರಿನ ಮೈದಾನವನ್ನು ಅಭಿವೃದ್ಧಿಗೊಳಿಸಿ ಪಂದ್ಯಾವಳಿ ನಡೆಸಿ ಅದನ್ನು ಆಯಾ ಶಾಲಾ ಕಾಲೇಜುಗಳ ಸುಪದರ್ಿಗೆ ನೀಡುವುದು ನಡೆದುಕೊಂಡು ಬಂದ ರೂಢಿಯಾಗಿದೆ.
ಕೊಡವ ಹಾಕಿ ಆರಂಭವಾದಲ್ಲಿಂದ ಇಲ್ಲಿಯವರೆಗೆ ಹಲವಾರು ಶಾಲಾ ಕಾಲೇಜುಗಳ ಮೈದಾನಗಳು ಅಭಿವೃದ್ಧಿಯಾಗಿವೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.