ಮಡಿಕೇರಿ: ಕೊಡಗಿನ ಮೆಕ್ಕಾ ಎಂದೇ ಜನವಲಯದಲ್ಲಿ ಹೆಸರುವಾಸಿಯಾಗಿರುವ ಪ್ರಮುಖ ಪವಿತ್ರ ತಾಣ ಎಮ್ಮೆಮಾಡುವಿನಲ್ಲೀಗ ವಾರ್ಷಿಕ ಮಖಾಂ ಉರೂಸ್ ನಡೆಯುತ್ತಿದ್ದು, ಸಂಭ್ರಮ ಮನೆಮಾಡಿದೆ. ಎಮ್ಮೆಮಾಡು ಮಖಾಂ ಉರೂಸ್ ಎಂದರೆ ಕೊಡಗು ಮಾತ್ರವಲ್ಲದೆ ಎಲ್ಲಾ ಕಡೆಗಳಿಂದಲೂ ಜನ ಇಲ್ಲಿ ಬರುತ್ತಾರೆ.
ಹಾಗೆ ನೋಡಿದರೆ ಬೆಟ್ಟಗುಡ್ಡ, ಕಾಫಿ ತೋಟಗಳ ನಿಸರ್ಗ ರಮಣೀಯ, ಪ್ರಶಾಂತ ಸ್ಥಳದಲ್ಲಿ ನೆಲೆ ನಿಂತಿರುವ ಎಮ್ಮೆಮಾಡು ಭಾವೈಕ್ಯತೆಯ ಕೇಂದ್ರವಾಗಿ ಜಿಲ್ಲೆ ಮಾತ್ರವಲ್ಲದೆ, ದೇಶ ವಿದೇಶಗಳ ಜನರ ಗಮನ ಸೆಳೆಯುತ್ತಿದೆ. ಹೀಗಾಗಿಯೇ ಈ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಕೊಡಗಿನಲ್ಲಿರುವ ಪ್ರಾರ್ಥನಾ ಮಂದಿರಗಳಿಗೆ ಹೋಲಿಸಿದರೆ ಎಮ್ಮೆಮಾಡು ತನ್ನದೇ ಆದ ಇತಿಹಾಸ, ನಿಸರ್ಗ ಸೌಂದರ್ಯ ಹಾಗೂ ಧಾರ್ಮಿಕ ಕಾರ್ಯಗಳಿಂದ ವಿಶಿಷ್ಟವಾಗಿ ಕಂಗೊಳಿಸುತ್ತದೆ. ಭಾವೈಕ್ಯತೆಯ ಸಂಗಮವಾಗಿರುವ ಎಮ್ಮೆಮಾಡು ಇವತ್ತು ಸಹಸ್ರಾರು ಸಂಖ್ಯೆಯ ಭಕ್ತರನ್ನು ತನ್ನತ್ತ ಸೆಳೆದಿದ್ದರೆ ಅದಕ್ಕೆ ಸೂಫಿ ಸಂತರು ಕಾಲಿಟ್ಟು ಪಾವನಗೊಳಿಸಿದ ಪುಣ್ಯ ಭೂಮಿ ಕಾರಣವಾಗಿದೆ.
ಸೂಫಿ ಸಂತರು ತಮ್ಮ ಜೀವಿತಾವಧಿಯ ಕೊನೆಯ ಕಾಲದಲ್ಲಿ ಈ ಗ್ರಾಮಕ್ಕೆ ಆಗಮಿಸಿ ಸಮಾಧಿ ಹೊಂದುವುದರ ಮೂಲಕ ಅಂತಿಮ ವಿಶ್ರಾಂತಿ ಪಡೆಯುತ್ತಿದ್ದು, ಜೀವನದಲ್ಲೊಮ್ಮೆ ಆ ಸಂತರ ದರ್ಶನ ಭಾಗ್ಯ ಪಡೆದು ಧನ್ಯರಾಗಲು ಜಾತಿ ಮತ ಮರೆತು ಭಕ್ತರು ಆಗಮಿಸುತ್ತಾರೆ. ಪುಟ್ಟ ಗ್ರಾಮವಾದ ಎಮ್ಮೆಮಾಡು ಇವತ್ತು ದೇಶ ವಿದೇಶಗಳಲ್ಲಿ ತನ್ನ ಛಾಪು ಮೂಡಿಸಿದ್ದರೆ ಅದಕ್ಕೆ ಕಾರಣ ಇಲ್ಲಿ ನಡೆಯುತ್ತಿರುವ ಪವಾಡಗಳು ಮತ್ತು ಇಂದಿಗೂ ಭಕ್ತರ ಇಷ್ಟಾರ್ಥಗಳು ನೆರವೇರುತ್ತಿರುವುದು ಕಾರಣವಾಗಿದೆ.
ಎಮ್ಮೆಮಾಡುವಿನ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿಹಾಕುತ್ತಾ ಹೋದರೆ ಒಂದಷ್ಟು ಪವಾಡಗಳು ಗೋಚರಿಸುತ್ತವೆ. ನೂರಾರು ವರ್ಷಗಳ ಹಿಂದೆ ಊರೂರು ಅಲೆಯುತ್ತಾ ಶಾಂತಿ ಸಂದೇಶವನ್ನೂ ಸಾರುತ್ತಾ ಸಾಗುತ್ತಿದ್ದ ಸೂಫಿ ಶಹೀದ್ ಸಂತರು ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಕೊಡಗಿನ ಎಮ್ಮೆಮಾಡಿಗೆ ಬಂದಿದ್ದರು. ಬೆಟ್ಟಗುಡ್ಡಗಳು… ತೊರೆಗಳು… ಬೀಸುವ ತಂಗಾಳಿ… ಎಲ್ಲೆಡೆ ನೋಡಿದರೂ ಹಚ್ಚ ಹಸಿರಿನಿಂದ ಕಂಗೊಳಿಸುವ ನಿಸರ್ಗ ಸೂಫಿ ಶಹೀದ್ ಸಂತರನ್ನು ಸೆಳೆದಿತ್ತು. ತನ್ನ ಜೀವಿತಾವಧಿಯ ಕೊನೆಯ ವಿಶ್ರಾಂತಿಗೆ ಈ ತಾಣವೇ ಸೂಕ್ತವೆಂದು ನಿರ್ಧರಿಸಿದ ಅವರು ಗ್ರಾಮದ ಎಲ್ಲಾ ಜನಾಗದವರೊಂದಿಗೆ ಬೆರೆಯುತ್ತಾ ಅವರ ಕಷ್ಟಕಾರ್ಪಣ್ಯಕ್ಕೆ ಸಲಹೆ ನೀಡುತ್ತಾ ಜನತೆಯಲ್ಲಿ ಸೌಹಾರ್ಧತೆಯನ್ನು ಬೆಳೆಸುತ್ತಾ ಹೆಚ್ಚಿನ ಕಾಲವನ್ನು ದೇವರ ಸ್ಮರಣೆಯಲ್ಲೇ ಕಳೆಯತೊಡಗಿದ್ದರು.
ಸದಾ ದೇವರ ಧ್ಯಾನದಲ್ಲಿ ಮಗ್ನರಾಗಿರುತ್ತಿದ್ದ ಅವರನ್ನು ಜನ ಪೂಜ್ಯ ಭಾವನೆಯಿಂದ ಕಾಣುತ್ತಿದ್ದರಲ್ಲದೆ, ದೈವಸ್ವರೂಪಿಯಾದ ಅವರಿಗೆ ನಮಸ್ಕರಿಸಿ ಹೋಗುತ್ತಿದ್ದರು. ಸೂಫಿ ಶಹೀದ್ ಸಂತರ ಬಗ್ಗೆ ಕೇಳಿ ತಿಳಿದ ದೂರದ ಮಂದಿ ಅವರ ದರ್ಶನ ಭಾಗ್ಯಕ್ಕಾಗಿ ಹಾತೊರೆಯುತ್ತಿದ್ದರು. ದಿನಗಳು ಕಳೆಯುತ್ತಿದ್ದಂತೆಯೇ ಅವರಿಗೆ ತಮ್ಮ ಬದುಕಿನ ಅಂತಿಮ ದಿನಗಳು ಸಮೀಪಿಸುತ್ತಿದೆ ಎಂಬುವುದು ಗೋಚರವಾಗಿತ್ತು ಹಾಗಾಗಿ ಅವರು ಎಮ್ಮೆಮಾಡು ಬಳಿಯ ಬರಾಕೊಲ್ಲಿ ಎಂಬಲ್ಲಿ ಹೆಬ್ಬಂಡೆಯ ಮೇಲೆ ಮಲಗಿದ್ದರಂತೆ ಬಳಲಿದ್ದ ಅವರನ್ನು ಕಂಡ ಹಸುವೊಂದು ಕಟ್ಟಿಹಾಕಿದ ಹಗ್ಗವನ್ನು ತುಂಡರಿಸಿಕೊಂಡು ಬಂದು ಪಕ್ಕದಲ್ಲೇ ಹರಿದು ಹೋಗುತ್ತಿದ್ದ ತೋಡು(ತೊರೆ)ನ ನೀರಿನಲ್ಲಿ ತನ್ನ ಕೆಚ್ಚಲನ್ನು ಮುಳುಗಿಸಿಕೊಂಡು ಬಂದು ಮಂಡಿಯೂರಿ ಅವರ ಬಾಯಿಗೆ ಹಾಲುಣಿಸಿತಂತೆ. ಇದಕ್ಕೆ ಇಂದಿಗೂ ಬಂಡೆಕಲ್ಲಿನ ಮೇಲೆ ಉಳಿದಿರುವ ಕೆಲವು ಕುರುಹುಗಳು ಸಾಕ್ಷಿಯಾಗಿವೆ.
ಸೂಫಿ ಶಹೀದ್ ಸಂತರಿಗೆ ಹಸು ಹಾಲುಣಿಸಿದ ಪವಾಡ ನಡೆದಂದಿನಿಂದ ಇಲ್ಲಿಯವರೆಗೂ ಎಮ್ಮೆಮಾಡು ದಗರ್ಾ ಹಸುಕರುಗಳಿಗೆ ಉಂಟಾಗುವ ರೋಗ ರುಜಿನ ಇನ್ನಿತರ ಯಾವುದೇ ತೊಂದರೆಗಳಿಗೆ ಪರಿಹಾರ ನೀಡುತ್ತಾ ಬರುತ್ತಿರುವುದು ಗಮನಾರ್ಹವಾಗಿದೆ. ಮನೆಯಲ್ಲಿ ಸಾಕಿದ ಹಸುಕರುಗಳಿಗೆ ಏನಾದರು ಕಾಯಿಲೆ, ತೊಂದರೆಗಳು ಆದಾಗ ಎಮ್ಮೆಮಾಡು ದರ್ಗಾಕ್ಕೆ ಹರಕೆ ಹೊತ್ತುಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪ್ರತಿ ವರ್ಷವೂ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಸಿದ್ದಕ್ಕಾಗಿ ಬೆಳ್ಳಿಯ ಹಸುಕರುವಿನ ಪ್ರತಿಕೃತಿ ಹಾಗೂ ತುಪ್ಪ, ನಗದನ್ನು ಹರಕೆಯ ರೂಪದಲ್ಲಿ ಒಪ್ಪಿಸುತ್ತಾರೆ.
ಇದುವರೆಗೆ ಕೇವಲ ದನಕರುಗಳ ಸಮಸ್ಯೆಗೆ ಮಾತ್ರವಲ್ಲದೆ, ಮಾನಸಿಕ, ಶಾರೀರಿಕವಾಗಿ ಕೆಲವೊಂದು ತೊಂದರೆಗಳಿಂದ ಬಳಲುತ್ತಿದ್ದವರು ಕೂಡ ಇಲ್ಲಿಗೆ ಭೇಟಿ ನೀಡಿ ಪರಿಹಾರ ಕಂಡುಕೊಂಡ ಹಲವು ಉದಾಹರಣೆಗಳನ್ನು ನಾವು ಕಾಣಬಹುದು.
ಭಕ್ತರ ಇಷ್ಟಾರ್ಥಗಳು ನೆರವೇರುತ್ತಾ ಬಂದಿರುವುದರಿಂದ ದರ್ಗಾಕ್ಕೆ ಜಾತಿಭೇದವಿಲ್ಲದೆ ಎಲ್ಲಾ ಜನಾಂಗದವರು ದರ್ಶನ ಮಾಡಿ ಹರಕೆಹೊತ್ತು ಕಷ್ಟ ಪರಿಹಾರವಾದ ಬಳಿಕ ತಮ್ಮ ಹರಕೆಯನ್ನು ಅರ್ಪಿಸಿ ಹೋಗುತ್ತಾರೆ. ಒಂದು ಕಾಲದಲ್ಲಿ ಕುಗ್ರಾಮವಾದ ಎಮ್ಮೆಮಾಡು ಇಲ್ಲಿನ ದರ್ಗಾದ ಮಹಿಮೆಯಿಂದಾಗಿ ಅಭಿವೃದ್ಧಿಯತ್ತ ಸಾಗುತ್ತಿದ್ದು ಧಾರ್ಮಿಕ, ಸಾಮಾಜಿಕ ಮತ್ತು ವಿದ್ಯಾ ಕೇಂದ್ರವಾಗಿ ದಾಪುಗಾಲಿಡುತ್ತಿದೆ.
ಇಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಧಾರ್ಮಿಕ ಹಾಗೂ ಲೌಕಿಕ ಎರಡನ್ನೂ ಅಭ್ಯಾಸ ಮಾಡುವ ಅನುಕೂಲವಿದೆ. ಇದರೊಂದಿಗೆ ಸೂಫಿ ಶಹೀದ್ ಸಂತರ ಹೆಸರಿನಲ್ಲಿ ಶಹೀದಿಯಾ ಅನಾಥ ಮತ್ತು ಬಡ ಮಕ್ಕಳ ವಸತಿ ಗೃಹವನ್ನು ಕೂಡ ನಡೆಸಿಕೊಂಡು ಬರಲಾಗುತ್ತಿದೆ. ಈ ವಸತಿಗೃಹದಲ್ಲಿ ಆಶ್ರಯ ಪಡೆದಿರುವ ಅನಾಥ ಮತ್ತು ಬಡ ಮಕ್ಕಳಿಗೆ ತಾನು ಅನಾಥ, ನಿರ್ಗತಿಕನೆಂಬ ಪ್ರಜ್ಞೆ ಬಾರದಂತೆ ಉಚಿತ ಊಟ, ಪುಸ್ತಕ ಸೇರಿದಂತೆ ಸಕಲ ಸವಲತ್ತನ್ನು ನೀಡಿ ಅವರ ಉತ್ತಮ ಚಟುವಟಿಕೆಯನ್ನು ಪ್ರೋತ್ಸಾಹಿಸಿ ಬೆಳೆಸಲಾಗುತ್ತಿದೆ.
ಇನ್ನು ಇಲ್ಲಿರುವ ಮಸೀದಿಯಂತು ಸುಂದರವಾಗಿದ್ದು, ಜಿಲ್ಲೆಯಲ್ಲಿರುವ ಮಸೀದಿಗಳ ಪೈಕಿ ಅತಿ ದೊಡ್ಡದಾದ ಮಸೀದಿಯಾಗಿದೆ. ಸುಮಾರು ಒಂದು ಕೋಟಿಗೂ ಹೆಚ್ಚು ಖರ್ಚು ಮಾಡಿ ನಿರ್ಮಿಸಲಾಗಿರುವ ಮಸೀದಿಯು ಸಾವಿರಾರು ಮಂದಿ ನೆರೆದು ಪ್ರಾರ್ಥನೆ ಸಲ್ಲಿಸುವಷ್ಟು ವಿಸ್ತಾರವನ್ನು ಹೊಂದಿದೆ. ಎಮ್ಮೆಮಾಡಿನಲ್ಲಿ ಸೂಫಿ ಶಹೀದ್ ಸಂತರ ಮಸೀದಿಯಲ್ಲದೆ, ಪ್ರವಾದಿ ಮಹಮ್ಮದ್ ಪೈಗಂಬರ್ರವರ ವಂಶಸ್ಥರಾದ ಸೈಯದ್ ಹಸನ್ ಸಖಾಫ್ ಎಂಬ ಮತ್ತೊಬ್ಬ ಸಂತರ ಮಸೀದಿಯನ್ನು ಕೂಡ ಕಾಣಬಹುದು. ಈ ಮಸೀದಿಯು ಸೂಫಿ ಶಹೀದ್ ದರ್ಗಾ ಶರೀಫ್ ಗೆ ತೆರಳುವ ಮಾರ್ಗದ ಬಲಬದಿಯಲ್ಲಿದೆ. ಬಹಳ ವರ್ಷಗಳ ಹಿಂದಿನ ದರ್ಗಾಗಳಾದ ಇವುಗಳನ್ನು ಪುನರ್ ರಚಿಸಲಾಗಿದೆ.
ಪ್ರತಿವರ್ಷವೂ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಸೂಫಿ ಶಹೀದ್ ಸಂತರ ಹೆಸರಿನಲ್ಲಿ ಉರೂಸ್ ನಡೆಯುತ್ತದೆ. ಈ ಸಂದರ್ಭ ಇತರ ಜನಾಂಗದವರೂ ನೆರೆಯುತ್ತಾರೆ. ಅಷ್ಟೇ ಮಾತ್ರವಲ್ಲದೆ, ವಿವಿಧ ಜನಾಂಗಗಳ ಪ್ರಮುಖರನ್ನು ಆಹ್ವಾನಿಸಿ ಭಾವೈಕ್ಯತಾ ಧರ್ಮ ಸಮ್ಮೇಳನವನ್ನು ನಡೆಸಲಾಗುತ್ತದೆ. ಇದೇ ಸಂದರ್ಭ ಸಹಸ್ರಾರು ಮಂದಿಗೆ ಅನ್ನದಾನವನ್ನು ಮಾಡಲಾಗುತ್ತದೆ.
ಹತ್ತು ಹಲವು ವಿಶೇಷತೆಗಳನ್ನು ತನ್ನೊಡಲಲ್ಲಿ ತುಂಬಿಕೊಂಡು, ತನ್ನಡೆಗೆ ಬರುವ ಭಕ್ತಾಧಿಗಳ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಬಂದಿರುವ ಎಮ್ಮೆಮಾಡು ತಾಣ ಕೊಡಗಿನ ಮಡಿಕೇರಿಯಿಂದ 32ಕಿಲೋ ಮೀಟರ್ ದೂರದಲ್ಲಿದ್ದು, ನಾಪೋಕ್ಲಿಗೆ ಸಮೀಪದಲ್ಲಿದೆ.