ಮಂಡ್ಯ: ಬೇಸಿಗೆ ದಿನಗಳಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಕಾರಣ ಒಂದಲ್ಲ ಒಂದು ಕಾರಣಕ್ಕೆ ಅಗ್ನಿಅನಾಹತಗಳು ಸಂಭವಿಸುತ್ತಲೇ ಇರುತ್ತದೆ.
ಅರಣ್ಯದಲ್ಲಿ ಕಾಡ್ಗಿಚ್ಚು ಸಾಮಾನ್ಯವಾದರೂ ಇತ್ತೀಚೆಗೆ ಜಮೀನಿಗೆ ಬೆಂಕಿಬಿದ್ದು ರೈತರು ನಷ್ಟ ಅನುಭವಿಸುತ್ತಿರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಕೆಲವರು ಬೀಡಿ ಸಿಗರೇಟ್ ಸೇದಿ ಎಲ್ಲೆಂದರಲ್ಲಿ ಎಸೆಯುವುದು ಕೂಡ ಅಗ್ನಿ ಅನಾಹುತಕ್ಕೆ ಕಾರಣವಾಗುತ್ತಿದೆ.
ಕೆ.ಆರ್.ಪೇಟೆ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು ಪ್ರಗತಿಪರ ರೈತ ವಿ.ಡಿ.ದೇವೇಗೌಡ ಅವರು ಕಷ್ಟಪಟ್ಟು ಮಾಡಿದ್ದ ತೋಟ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದ್ದು, ತೋಟದಲ್ಲಿ ಬೆಳೆದಿದ್ದ ತೆಂಗಿನ ಮರ, ತೇಗದ ಮರ ಸೇರಿದಂತೆ ಹಲವು ವೃಕ್ಷ ಸಂಕುಲ ಸುಟ್ಟು ಹೋಗಿವೆ.
ದೇವೇಗೌಡ ಅವರು ಒಂದೂವರೆ ಎಕರೆ ತೋಟದಲ್ಲಿ 50ತೆಂಗಿನ ಮರ ಬೆಳೆದಿದ್ದು, ಅವು ಫಸಲು ಕೊಡುತ್ತಿದ್ದರೆ, 40 ತೇಗದ ಗಿಡಗಳನ್ನು ನೆಟ್ಟಿದ್ದು, ಅವು ಚೆನ್ನಾಗಿ ಬೆಳೆದಿದ್ದವು. ಸೋಮವಾರ ಜಮೀನಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.
ವಿಷಯ ತಿಳಿದು ಸ್ಥಳಕ್ಕೆ ದೇವೇಗೌಡ ಸೇರಿದಂತೆ ಹಲವರು ಬಂದು ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಅಗ್ನಿಶಾಮಕ ಠಾಣೆಗೂ ಮಾಹಿತಿ ನೀಡಿದ್ದಾರೆ. ಆದರೆ ಬೆಂಕಿ ರಭಸವಾಗಿ ಹರಡಿ ಉರಿಯುತ್ತಿದ್ದರಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ. ಬೆಂಕಿಯ ಕೆನ್ನಾಲಿಗೆಗೆ ತೆಂಗಿನ ಮರಗಳು, ತೇಗದ ಗಿಡಗಳು ಸೇರಿದಂತೆ ತೋಟದಲ್ಲಿದ್ದ ವನ್ಯ ಸಂಪತ್ತು ಬೆಂಕಿಗೆ ಆಹುತಿಯಾಗಿದೆ. ಇದರಿಂದ ಸುಮಾರು 5ಲಕ್ಷದಷ್ಟು ನಾಶವಾಗಿದೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಬಂದರೂ ಆ ವೇಳೆಗಾಗಲೇ ತೋಟ ಸಂಪೂರ್ಣ ಸುಟ್ಟು ಹೋಗಿತ್ತು. ಬೂಕನಕೆರೆ ಹೋಬಳಿ ರಾಜಸ್ವ ನಿರೀಕ್ಷಕ ರಾಜಮೂತರ್ಿ, ಗ್ರಾಮ ಲೆಕ್ಕಾಧಿಕಾರಿ ರಘು, ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.