ಕೆ.ಆರ್.ಪೇಟೆ: ತಾಲೂಕಿನ ಬೂಕನಕೆರೆ ಹೋಬಳಿ ಮಾವಿನಕೆರೆ ಗ್ರಾಮದ ಯಲ್ಲೆಯಲ್ಲಿ ಜಮೀನು ಹೊಂದಿರುವ ಬಲ್ಲೇನಹಳ್ಳಿ ನಿವಾಸಿ ಪ್ರಗತಿಪರ ರೈತ ಬಿ.ವಿ.ಪುಟ್ಟರಾಜೇಗೌಡ ಅವರಿಗೆ ಸೇರಿದ ಮಾವಿನತೋಟಕ್ಕೆ ಆಕಸ್ಮಿಕವಾಗಿ ಬೆಂಕಿಬಿದ್ದು ತೋಟದಲ್ಲಿದ್ದ ಮಾವು ಮತ್ತು ತೆಂಗಿನ ಗಿಡಗಳು ಸುಟ್ಟು ಹೋಗಿವೆ.
ರೈತ ಪುಟ್ಟರಾಜೇಗೌಡ ಅವರಿಗೆ ಗ್ರಾಮದ ಸಮೀಪದ ಮಾವಿನಕೆರೆ ಸರಹದ್ದಿನ ಸರ್ವೇ ನಂ. 83/1ಪೈ ಮತ್ತು 2 ರಲ್ಲಿ 1ಎಕರೆ 21ಗುಂಟೆ ಜಮೀನಿತ್ತು. ಇದರಲ್ಲಿ ಅವರು ಮಾವಿನ ಮತ್ತು ತೆಂಗಿನ ಬೆಳೆ ಮಾಡಿದ್ದರು. ಈ ತೋಟಕ್ಕೆ ಆಕಸ್ಮಿಕ ಬೆಂಕಿಬಿದ್ದು 40 ಮಾವಿನ ಗಿಡಗಳು ಮತ್ತು ಹತ್ತಾರು ತೆಂಗಿನ ಮರಗಳು ಸುಟ್ಟು ಕರಕಲಾಗಿರುವ ಘಟನೆ ವರದಿಯಾಗಿದೆ.
ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿರುವ ರೈತ ತಾವು ಕಷ್ಟಪಟ್ಟು ಬೆಳೆದಿದ್ದ ಮಾವಿನ ತೋಟಕ್ಕೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ ಮೌಲ್ಯದ ಮಾವಿನ ಗಿಡಗಳು ಮತ್ತು ಹತ್ತಾರು ತೆಂಗಿನ ಸಸಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಹೋಗಿವೆ ಎಂದು ದೂರು ನೀಡಿದ್ದಾರೆ, ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.