News Kannada
Thursday, September 29 2022

ಕರ್ನಾಟಕ

ಮೂವರು ಅಂತಾರಾಜ್ಯ ವಾಹನ ಚೋರರ ಬಂಧನ : 10 ವಾಹನಗಳು ವಶ - 1 min read

Photo Credit :

ಮೂವರು ಅಂತಾರಾಜ್ಯ ವಾಹನ ಚೋರರ ಬಂಧನ : 10 ವಾಹನಗಳು ವಶ

ಮಡಿಕೇರಿ: ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಕೊಡಗು ಜಿಲ್ಲಾ ಪೊಲೀಸ್ ಅಪರಾಧ ಪತ್ತೆ ದಳ ಮೂವರು ಅಂತಾರಾಜ್ಯ ಚೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರು ಪೊಲೀಸರ ಯಶಸ್ವೀ ಕಾರ್ಯಾಚರಣೆ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಕೇರಳದ ಕಾಸರಗೋಡಿನವನಾದ, ಜಿಲ್ಲೆಯ ಶಿರಂಗಾಲದಲ್ಲಿ ನೆಲೆಸಿರುವ ನಿವಾಸಿ ಮೊಹಮ್ಮದ್ ಸಲೀಂ ಅಲಿಯಾಸ್ ಅಣಗೂರು ಸಲೀಂ, ಕೇರಳದ ಪತ್ತಣಂತಿಟ್ಟ ಜಿಲ್ಲೆಯ ಅಡೂರು ನಿವಾಸಿ ಸಾಜು ವರ್ಗೀಸ್ ಮತ್ತು ಕೇರಳದ ಮಲಪ್ಪುರಂನ ಮಹಮ್ಮದ್ ಸಾಫಿ ಕೆ. ಎಂಬವರನ್ನು ಬಂಧಿತ ಆರೋಪಿಗಳು. ಇವರು ಕಳವು ಮಾಡಿದ್ದ 33 ಲಕ್ಷ ರೂ.ಮೌಲ್ಯದ 10 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕುಶಾಲನಗರ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕ್ವಾಲಿಸ್ ಕಳವು ಪ್ರಕರಣದ ಹಿನ್ನೆಲೆಯಲ್ಲಿ ಡಿಸಿಐಬಿ ನಿರೀಕ್ಷಕ ಲಿಂಗಪ್ಪ  ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಜಿಲ್ಲೆಯ ಎಲ್ಲಾ ಚೆಕ್ ಪೊಸ್ಟ್ ಗಳಲ್ಲಿ ಬಂದೋಬಸ್ತ್ ಬಿಗಿ ಗೊಳಿಸಲಾಗಿತ್ತು. ಆ.10 ರಂದು ರಾತ್ರಿ ಪೊಲೀಸರು ನಗರದ ಕುಶಾಲನಗರ ರಸ್ತೆಯ ಚೈನ್ ಗೇಟ್ ಬಳಿ ಗಸ್ತಿನಲ್ಲಿರುವ ಸಂದರ್ಭ ಅಲ್ಲಿದ್ದ ಕಪ್ಪು ಬಣ್ಣದ ಕ್ವಾಲಿಸ್ ವಾಹನ ಮತ್ತು ಅದರಲ್ಲಿದ್ದ ವ್ಯಕ್ತಿಗಳ ಬಗ್ಗೆ ಸಂಶಯಗೊಂಡು ವಾಹನವನ್ನು ತಪಾಸಣೆಗೊಳಪಡಿಸಿದರು. ವಾಹನಕ್ಕೆ ಯಾವುದೇ ದಾಖಲೆಗಳು ಇಲ್ಲದಿರುವುದು ಕಂಡು ಬಂದುದಲ್ಲದೆ, ಚಾಕು ಸೇರಿದಂತೆ ವಿವಿಧ ಸಲಕರಣೆಗಳಿರುವುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ವಾಹನವನ್ನು ವಶಕ್ಕೆ ಪಡೆದು, ಮೂವರು ವ್ಯಕ್ತಿಗಳನ್ನು ವಿಚಾರಗೊಳಪಡಿಸಲಾಯಿತು.

ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಇದೇ ಆ.7 ರಂದು ಕುಶಾಲನಗರದಲ್ಲಿ ನಡೆದಿದ್ದ ಕ್ವಾಲಿಸ್ ಕಳವು ಪ್ರಕರಣಕ್ಕೆ ಇವರೇ ಕಾರಣರೆಂಬುದು ಬೆಳಕಿಗೆ ಬಂದಿತಲ್ಲದೆ, ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ನಡೆದ ವಾಹನ ಕಳ್ಳತನ ಪ್ರಕರಣಗಳು ಬಯಲಿಗೆ ಬಂದಿದೆ.

ವಾಹನ ಕಳವು ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಸಲೀಂ ಕುಶಾಲನಗರ ಬಳಿಯ ಶಿರಂಗಾಲದ ತೊರೆನೂರು ಮುಖ್ಯ ರಸ್ತೆಯಲ್ಲಿ ಕೇರಳ ಹೊಟೇಲ್ ನಡೆಸಿಕೊಂಡು ರಹಸ್ಯವಾಗಿ ವಾಹನ ಕಳ್ಳತನಗಳನ್ನು ನಡೆಸುತ್ತಿದ್ದ ವೃತ್ತಿ ನಿರತ ಚೋರ. ಈತ 1990 ರಿಂದಲೆ ನೆರೆಯ ಕೇರಳ ಸೇರಿದಂತೆ ಹಾಸನ, ಹೊಳೆನರಸೀಪುರ ಮೊದಲಾದೆಡೆಗಳಲ್ಲಿ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದು. ಸಾಜು ವರ್ಗೀಸ್ ಕೇರಳದ ಕಣ್ಣನ್ನೂರು ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿಕೊಂಡಿದ್ದ. ಮೊಹಮ್ಮದ್ ಸಾಫಿ ಕೇರಳದ ಮಲಪ್ಪುರಂ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಟಗಳಲ್ಲಿ ಭಾಗಿಯಾಗಿರುವುದಾಗಿ ಎಸ್ಪಿ ತಿಳಿಸಿದರು.

ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಶಿರಂಗಾಲದಲ್ಲಿನ ಮೊಹಮ್ಮದ್ ಸಲೀಂ ವಾಸ ಸ್ಥಳದಿಂದ 2 ಕ್ವಾಲಿಸ್, 2 ಟಿಪ್ಪರ್, 2 ಬೈಕ್, 3 ಕಾರು, ಒಂದು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿರುವುದಲ್ಲದೆ, 20 ಸಾವಿರ ರೂ. ನಗದನ್ನು ವಶ ಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಡಿಸಿಐಬಿ ನಿರೀಕ್ಷಕ ಬಿ.ಆರ್. ಲಿಂಗಪ್ಪ, ಸಿಬ್ಬಂದಿಗಳಾದ ಎಎಸ್ಐ ಹಮೀದ್, ಎನ್.ಟಿ. ತಮ್ಮಯ್ಯ, ವಿ.ಜಿ. ವೆಂಕಟೇಶ್, ಕೆ.ಎಸ್. ಅನಿಲ್ ಕುಮಾರ್, ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಆರ್. ವಸಂತ್, ಕೆ.ಎಸ್. ಶಶಿ ಕುಮಾರ್, ಸಜಿ, ಯು.ಎ. ಮಹೇಶ್, ಎಂ.ಬಿ. ಸುಮತಿ ಸುಬ್ಬಯ್ಯ, ಸುಮೇಶ್, ಮಧು ಸೂದನ್, ರಾಜೇಶ್ ಮತ್ತು ಗಿರೀಶ್ ಪಾಲ್ಗೊಂಡಿದ್ದರು.

See also  ಅನರ್ಹ ಕುಟುಂಬಗಳ ಸದಸ್ಯರು ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರಚೀಟಿ ಹಿಂದಿರುಗಿಸುವಂತೆ ಜಿಲ್ಲಾಧಿಕಾರಿ ಸೂಚನೆ 

ಬಹುಮಾನ ಘೋಷಣೆ:
ಅಂತಾರಾಜ್ಯ ವಾಹನ ಚೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಡಿಸಿಐಬಿ ತಂಡಕ್ಕೆ 20 ಸಾವಿರ ರೂ.ಗಳ ವಿಶೇಷ ಬಹುಮಾನವನ್ನು ಘೋಷಿಸಿರುವುದಾಗಿ ಎಸ್ಪಿ ರಾಜೇಂದ್ರ ಪ್ರಸಾದ್ ತಿಳಿಸಿದರು. ಈ ಸಂದರ್ಭ ಡಿವೈಎಸ್ಪಿ ಎಸ್.ಬಿ.ಛಬ್ಬಿ ಉಪಸ್ಥಿತರಿದ್ದರು.
 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು