News Kannada
Sunday, September 25 2022

ಕರ್ನಾಟಕ

ಸುಪ್ರೀಂ ತೀರ್ಪಿಗೆ ಆಕ್ರೋಶ: ಮಂಡ್ಯ ಧಗಧಗ - 1 min read

Photo Credit :

ಸುಪ್ರೀಂ ತೀರ್ಪಿಗೆ ಆಕ್ರೋಶ: ಮಂಡ್ಯ ಧಗಧಗ

ಮಂಡ್ಯ: ಮಂಡ್ಯದ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿ ಜಿಲ್ಲೆಯಾದ್ಯಂತ ವಿವಿಧ ರೀತಿಯ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಸಕ್ಕರೆನಾಡು ಅಕ್ಷರಶಃ ಕುದಿಯುತ್ತಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದ ವಿರುದ್ಧ ರೈತ ಹಿತರಕ್ಷಣಾ ಸಮಿತಿ ಮಂಗಳವಾರ ಕರೆ ನೀಡಿದ್ದ ಮಂಡ್ಯ ಜಿಲ್ಲಾ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೈಸೂರು-ಬೆಂಗಳೂರು ಹೆದ್ದಾರಿ ಸಂಪೂರ್ಣ ಸ್ಥಗಿತವಾಗಿತ್ತು. ಬೆಳ್ಳಂಬೆಳಗ್ಗೆ ಸಾರಿಗೆ ಸಂಸ್ಥೆಯ ಬಸ್ಸುಗಳು, ಖಾಸಗಿ ಬಸ್ಸುಗಳು ವಿರಳವಾಗಿ ಸಂಚಾರ ನಡೆಸುತ್ತಿದ್ದವಾದರೂ, ಬೆಳಗ್ಗೆ 7ರ ಬಳಿಕ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ರಸ್ತೆಗೆ ಇಳಿಯಲಿಲ್ಲ.

ಜೆ.ಸಿ. ವೃತ್ತದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಜಯ ಕರ್ನಾಟಕ ಸಂಘಟನೆಯ ವಿನಯ್ ಎಂಬ ಕಾರ್ಯಕರ್ತರ ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ. ತಕ್ಷಣ ಜಾಗೃತರಾದ ಪೊಲೀಸರು ಆತನನ್ನು ಎಳೆದೊಯ್ದು, ಅನಾಹುತವನ್ನು ತಪ್ಪಿಸಿದರು.

ಉರುಳಿದ ಕಾರ್ಯಕರ್ತರು:
ಕಸ್ತೂರಿ ಜನಪರ ವೇದಿಕೆ ಕಾರ್ಯಕರ್ತರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಉರುಳು ಸೇವೆ ನಡೆಸಿದರು. ಬಿಜೆಪಿ ಕಾರ್ಯಕರ್ತರು, ಜಯಕರ್ನಾಟಕ ಹಾಗೂ ಕನ್ನಡ ಸೇನೆ ಕಾರ್ಯಕರ್ತರು ನಗರದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯ ಯೂತ್ ಗ್ರೂಪ್ ನ ಪದಾಧಿಕಾರಿಗಳು ನ್ಯಾಯ ಎಲ್ಲಿದೆ ಎಂಬ ಘೋಷ ವಾಕ್ಯದಡಿ ನ್ಯಾಯ ದೇವತೆಯ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿ ಅಣಕ ಮಾಡಿದರು.

ಸರ್ಕಾರಿ ಕಚೇರಿಗೆ ಬೀಗ ಜಡಿದರು:
ನಗರದ ಆರ್ ಪಿಸಿಎಂಎಸ್ ಡಿಸಿಸಿ ಬ್ಯಾಂಕ್, ಕಾವೇರಿ ನೀರಾವರಿ ನಿಗಮ, ಲೋಕೋಪಯೋಗಿ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಿಗೆ ಮುತ್ತಿಗೆ ಹಾಕಿದರು. ಬಳಿಕ ಕಚೇರಿ ಒಳಗೆ ನುಗ್ಗಿದ ಕಾರ್ಯಕರ್ತರು ಎಲ್ಲಾ ಸಿಬ್ಬಂದಿ, ನೌಕರರನ್ನು ಕಚೇರಿಯಿಂದ ಹೊರಗೆ ಕಳುಹಿಸಿ ಕಚೇರಿ ಬಾಗಿಲಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್. ಪೇಟೆ, ಪಾಂಡವಪುರ ತಾಲೂಕು ಕೇಂದ್ರಗಳಲ್ಲೂ  ರೈತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧ ಗ್ರಾಮಗಳಾದ ಬೂದನೂರು, ಹನಕೆರೆ, ಗೆಜ್ಜಲಗೆರೆ, ಮದ್ದೂರು, ಕೆ.ಎಂ.ದೊಡ್ಡಿ, ಮಳವಳ್ಳಿ ಹಾಡ್ಲಿ ವೃತ್ತ, ಕಾಗೇಪುರ, ಅರಕೆರೆ, ಇಂಡುವಾಳು, ಬೆಳಗೊಳ, ಕೆ.ಆರ್.ಎಸ್, ಕೆನ್ನಾಳು, ತಗ್ಗಹಳ್ಳಿ, ಚಿಕ್ಕಮಂಡ್ಯ, ಸಾತನೂರು, ಕಾರಸವಾಡಿ, ಪಣಕನಹಳ್ಳಿ, ಹುಲಿವಾನ, ದೊಡ್ಡಗರುಡನಹಳ್ಳಿ, ಮಾದರಹಳ್ಳಿ, ಸುಂಡಹಳ್ಳಿ, ಯಲಿಯೂರು, ಕೊತ್ತತ್ತಿ, ಬೇವಿನಹಳ್ಳಿಗಳಲ್ಲಿ ಪ್ರತಿಭಟಿಸಿದರು.

ಕೇಂದ್ರ ಸರ್ಕಾರದ ಸ್ವಾಮ್ಯಕ್ಕೊಳಪಟ್ಟಿರುವ ಪ್ರಧಾನ ಅಂಚೆ ಕಚೇರಿ ಹಾಗೂ ಬಿಎಸ್ಎನ್ಎಲ್ ಕಚೇರಿ ಮುಂದೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ರೈತರ ಸಂಘದ ಮುಖಂಡರಾದ ಕೋಣಸಾಲೆ ನರಸರಾಜು, ಹನಿಯಂಬಾಡಿ ನಾಗರಾಜು, ರಾಮಕೃಷ್ಣೇಗೌಡ, ಶಂಭೂನಹಳ್ಳಿ ಸುರೇಶ್, ಕರವೇ ಎಚ್.ಡಿ. ಜಯರಾಂ, ಎಸ್. ನಾರಾಯಣ್, ಕೆ.ಟಿ. ಶಂಕರೇಗೌಡ, ಮಂಜುನಾಥ್,  ಬಿಜೆಪಿಯ ಅರವಿಂದ್, ಸಿದ್ದರಾಜುಗೌಡ ಸೇರಿದಂತೆ ನೂರಾರು ಮಂದಿ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

See also  ಕೊಡಗು ಜಿಲ್ಲಾ ಎಸ್‍ಪಿಯಾಗಿ ಡಾ.ಸುಮನ್ ಡಿ. ಪಣ್ಣೇಕರ್ ಅಧಿಕಾರ ಸ್ವೀಕಾರ

ಸುಪ್ರೀಂ ಕೋರ್ಟ್  ಆದೇಶ ವಿರೋಧಿಸಿ ಜಿಲ್ಲಾದ್ಯಂತ ಆಕ್ರೋಶ, ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. 950 ಅರೆ ಸೇನಾ ಪಡೆಯ ಸಿಬ್ಬಂದಿ, ನಾಲ್ವರು ಡಿವೈಎಸ್ಪಿ, 8 ಸಿಪಿಐ, 13 ಪಿಎಸ್ಐ, 104 ಎಎಸ್ಐ, 1300 ಪೊಲೀಸ್ ಸಿಬ್ಬಂದಿ ಸೇರಿದಂತೆ 2400 ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 4 ಕೆ.ಎಸ್.ಆರ್.ಪಿ. ಮೀಸಲು ಪಡೆಯ ತುಕಡಿಗಳು ಬೀಡು ಬಿಟ್ಟಿವೆ. 100 ಕ್ಷಿಪ್ರ ಪಡೆಗಳು ಆಗಮಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಕಟೌಟ್ ಗಳಿಗೆ ಬೆಂಕಿ
ನಗರದ ಜೆಸಿ ವೃತ್ತದಲ್ಲಿ ಪ್ರತಿಭಟಿಸುತ್ತಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರು ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಸಂದರ್ಭ ಅಗ್ನಿ ಶಾಮಕ ಸಿಬ್ಬಂದಿ ನೀರನ್ನು ಹಾಕಿ ಬೆಂಕಿಯನ್ನು ನಂದಿಸಿದರು.

ಇದರಿಂದ ಮತ್ತಷ್ಟು ಆಕ್ರೋಶಗೊಂಡ ಪ್ರತಿಭಟನಾಕಾರರು ಸನಿಹದ ಸಂಜಯ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದ್ದ ಹ್ಯಾಪಿ ಬರ್ತಡೇ ಸಿನಿಮಾಕ್ಕೆ ಹಾಕಿದ್ದ ಅಂಬರೀಶ್, ನಾಯಕ ನಟ ಸಚಿನ್ ಕಟೌಟ್ ಗಳನ್ನು ಕಿತ್ತು ಬೆಂಕಿ ಹಚ್ಚಿದರಲ್ಲದೆ, ವೃತ್ತದಲ್ಲೇ ಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಹಾಗೂ ಜಾಗ್ವಾರ್ ಚಿತ್ರದ ಫ್ಲೆಕ್ಸ್ ಗಳನ್ನು ಕಿತ್ತು ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಆರ್.ಎಸ್.ನಿಂದ ನೀರು ಬಿಡಲು ಸುಪ್ರೀಂ ಕೋಟರ್್ನ ನಿದರ್ೇಶನದ ಪ್ರತಿ ಹಾಗೂ ತ.ನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರಗಳನ್ನು ಪ್ರತಿಭಟನಾಕಾರು ಸುಟ್ಟು ಹಾಕಿದರು.

ಇಬ್ಬರು ಕಿಡಿಗೇಡಿಗಳ ಬಂಧನ
ಕಾವೇರಿ ಪ್ರತಿಭಟನೆ ಸಂದರ್ಭ ಶಾಂತಿ ಕದಡಲು ಯತ್ನಿಸಿದ ಇಬ್ಬರು ಕಿಡಿಗೇಡಿಗಳನ್ನು ಪಶ್ಚಿಮ ಠಾಣಾ ಪೊಲೀಸರು ಬಂಧಿಸಿದರು.

ರಮ್ಯಾ ಭಾವಚಿತ್ರಕ್ಕೆ ಬೆಂಕಿ
ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿದ್ದ ಮಾಜಿ ಸಂಸದೆ ರಮ್ಯಾ ಅವರು ಸುಪ್ರೀಂ ಕೋರ್ಟಿನ ನಿರ್ದೇಶನದ ಬಗ್ಗೆ ಏನನ್ನೂ ಮಾತನಾಡದೆ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದಿದ್ದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು, ರಮ್ಯಾ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರ ಗುಂಪು ಕಚೇರಿಯಲ್ಲಿದ್ದ ರಾಜಕಾರಣಿಗಳ ಫ್ಲೆಕ್ಸ್ ಗಳನ್ನು ಹರಿದು ಹಾಕಿ ಬೆಂಕಿ ಹಚ್ಚಿದರು. ಜಾತ್ರೆ ರಾಣಿ ರಮ್ಯಾ, ಸಂತೆ ರಮ್ಯಾಗೆ ಧಿಕ್ಕಾರ ಎಂದು ಕೂಗಿದರು.

ಕಾಲ್ಕಿತ್ತ ಮಹಿಳಾ ಸೇನಾ ಪಡೆ
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳಾ ಪ್ರತಿಭಟನಾಕಾರರನ್ನು ಚದುರಿಸಲು ಸ್ಥಳಕ್ಕೆ ಧಾವಿಸಿದ ಮಹಿಳಾ ಸೇನಾ ಪಡೆಯ ವಿರುದ್ಧವೇ ಮಹಿಳೆಯರು ತಿರುಗಿಬಿದ್ದರು. ಜೆ.ಸಿ. ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರನ್ನು ಮಹಿಳಾ ಸೇನಾ ಪಡೆಯ ಸಿಬ್ಬಂದಿ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಇದರಿಂದ ಕೆರಳಿದ ಮಹಿಳೆಯರು ಸೇನೆಯ ವಿರುದ್ಧವೇ ತಿರುಗಿಬಿದ್ದರು. ಇದರಿಂದಾಗಿ ದಿಕ್ಕು ತೋಚದ ಮಹಿಳಾ ಸೇನಾ ಪಡೆಯ ಸಿಬ್ಬಂದಿ ಸ್ಥಳದಿಂದ ಕಾಲ್ಕಿತ್ತರು.

ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ
ಸುಪ್ರೀಂ ನಿರ್ದೇಶನವನ್ನು ಖಂಡಿಸಿ ರೈಲ್ವೆ ನಿಲ್ದಾಣಕ್ಕೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ರೈಲ್ವೆ ನಿಲ್ದಾಣದ ಒಳಗೆ ನುಗ್ಗಲು ಯತ್ನಿಸಿದಾಗ, ಅರೆಸೇನಾ ಪಡೆ ಹಾಗೂ ರೈಲ್ವೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಜಿಲ್ಲಾ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ರಜೆ ಘೋಷಿಸಿ ಆದೇಶ ಹೊರಡಿಸಿದ್ದರು.

See also  ಮುಗ್ಗಲು ಮೇವು ಸೇವಿಸಿ ರಾಸು ಸಾವು

ಬೃಂದಾವನ ಪ್ರವೇಶ ಇಲ್ಲ
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳು ಸುಪ್ರೀಂ ನಿರ್ದೇಶನ ವಿರೋಧಿಸಿ ಮಂಡ್ಯ ಜಿಲ್ಲಾ ಬಂದ್ ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಸಿದ್ಧ ಕೃಷ್ಣರಾಜಸಾಗರ ಜಲಾಶಯದ ಬೃಂದಾವನಕ್ಕೆ ಮೂರು ದಿನಗಳ ಕಾಲ ಪ್ರವಾಸಿಗರಿಗೆ ನಿಷೇಧ ವಿಧಿಸಿ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಆದೇಶ ಹೊರಡಿಸಿದ್ದಾರೆ.

ಇಂಡುವಾಳುವಿನಲ್ಲಿ ರಸ್ತೆಯಲ್ಲೇ ಅಡುಗೆ
ಮಂಡ್ಯ: ಸುಪ್ರೀಂ ಕೋರ್ಟ್ ನಿರ್ದೇಶನದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮಂಗಳವಾರ ಕರೆ ನೀಡಿದ್ದ ಮಂಡ್ಯ ಜಿಲ್ಲಾ ಬಂದ್ ಬೆಂಬಲಿಸಿ ತಾಲೂಕಿನ ಇಂಡುವಾಳು ಗ್ರಾಮದ ರೈತರು ಬೆಂ-ಮೈ ಹೆದ್ದಾರಿಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಧರಣಿ ಕುಳಿತು ರಾಜ್ಯ ಸರ್ಕಾರ ಹಾಗೂ ಸುಪ್ರೀಂ ನಿರ್ದೇಶನವನ್ನು ಖಂಡಿಸಿದರು.

ಬೆಳಗ್ಗೆಯಿಂದಲೇ ಹೆದ್ದಾರಿಯಲ್ಲಿ ಟೈರ್ ಹಾಗೂ ಸೌದೆಗೆ ಬೆಂಕಿ ಹಚ್ಚಿ ಧರಣಿ ಕುಳಿತಿದ್ದರಿಂದ ಬೆಂಗಳೂರಿನಿಂದ ಮೈಸೂರು ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಹೋಗುವ ವಾಹನಗಳು ಮಧ್ಯಾಹ್ನದ ವರೆಗೂ ನಿಂತಲ್ಲೇ ನಿಂತಿದ್ದವು. ಇದರಿಂದಾಗಿ ಪ್ರಯಾಣಿಕರು ಹಾಗು ವಾಹನ ಸವಾರರು ಪರದಾಡುವಂತಾಯಿತು.

ಮೇಲುಕೋಟೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರು ಧರಣಿಯಲ್ಲಿ ಭಾಗವಹಿಸಲು ಮಂಡ್ಯ ನಗರಕ್ಕೆ ಬರುತ್ತಿದ್ದರು. ಇದೇ ಸಮದಯಲ್ಲಿ ಇಂಡುವಾಳುವಿನಲ್ಲಿ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಆಗಮಿಸಿದ ಪುಟ್ಟಣ್ಣಯ್ಯ ಅವರನ್ನು ರೈತರು ಹಾಗೂ ಸಾರ್ವಜನಿಕರು ನಮಗೆ ನ್ಯಾಯ ದೊರಕಿಸಿಕೊಡಲು ಆಗದಿದ್ದರೆ ನೀವು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಪಟ್ಟುಹಿಡಿದರು. ಇದರಿಂದಾಗಿ ಪೀಕಲಾಟಕ್ಕೆ ಸಿಲುಕಿದ ಶಾಸಕ ಪುಟ್ಟಣ್ಣಯ್ಯ ಅವರು ರೈತರ ಪ್ರಶ್ನೆಗಳಿಗೆ ಉತ್ತರಿಸದೆ ಸ್ಥಳದಿಂದ ಪಲಾಯನಗೈದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು