ಮಡಿಕೇರಿ: ಕಾವೇರಿ ನದಿ ನೀರಿನ ವಿವಾದ ಮತ್ತು ಮಳೆಯ ಕೊರತೆಯಿಂದ ರಾಜ್ಯ ಜನತೆ ಹಾಗೂ ರೈತಾಪಿ ವರ್ಗ ಅನುಭವಿಸುತ್ತಿರುವ ಸಂಕಷ್ಟ ದೂರವಾಗಲೆಂದು ಪ್ರಾರ್ಥಿಸಿ ಆದಿಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿಗಳು ನಾಡಿಗೆ ಒಳಿತನ್ನು ಉಂಟು ಮಾಡುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಉದ್ದೇಶದಿಂದ ಕಾವೇರಿಯ ಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿಗೆ ಪ್ರತಿ ವರ್ಷ ಆಗಮಿಸುತ್ತಿರುವುದಾಗಿ ತಿಳಿಸಿದರು.
ಮುಂಗಾರು ಮಳೆಯ ಕೊರತೆಯಿಂದ ರಾಜ್ಯದ ಜನತೆ, ರೈತಾಪಿ ವರ್ಗ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಗಳು ನಿವಾರಣೆಯಾಗಿ ನಾಡು ಸುಭಿಕ್ಷೆಯನ್ನು ಹೊಂದಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು. ಇದಕ್ಕೂ ಮೊದಲು ಮಡಿಕೇರಿ ನಗರಕ್ಕೆ ಆಗಮಿಸಿದ ಸ್ವಾಮೀಜಿಗಳು ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಪ್ರತಿಮೆಗೆ ಪುಷ್ಪ ಹಾರವನ್ನು ಹಾಕಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಅಧ್ಯಕ್ಷರಾದ ತುಂತಜೆ ಗಣೇಶ್, ಕಾರ್ಯದರ್ಶಿ ಅಮೆ ಪಾಲಾಕ್ಷ, ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಮಡಿಕೇರಿ ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಗೌಡ ಸಮಾಜದ ಪ್ರಮುಖರಾದ ಅಂಬೆಕಲ್ ನವೀನ್ ಕುಶಾಲಪ್ಪ, ಕೋಡಿ ಚಂದ್ರಶೇಖರ್, ಯಾಲದಾಳು ಕೇಶವಾನಂದ, ಪೊನ್ನಚ್ಚನ ಮಧು ಸೋಮಣ್ಣ, ದಂಬೆಕೋಡಿ ಹರೀಶ್, ನಾಟೋಳನ ಈಶ್ವರ, ಬೈತಡ್ಕ ಜಾನಕಿ, ಅಂಬೆಕಲ್ ಕುಶಾಲಪ್ಪ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.