News Kannada
Friday, October 07 2022

ಕರ್ನಾಟಕ

ಟಿಪ್ಪು ಜಯಂತಿ: ಕೊಡಗಿನಲ್ಲಿ ಆತಂಕ ಶುರು - 1 min read

Photo Credit :

ಟಿಪ್ಪು ಜಯಂತಿ: ಕೊಡಗಿನಲ್ಲಿ ಆತಂಕ ಶುರು

ಮಡಿಕೇರಿ: ಒಂದೆಡೆ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನು ಮಾಡಿಯೇ ತೀರಬೇಕೆಂಬ ಹಠಕ್ಕೆ ಬಿದ್ದಿದ್ದು ಆದಕ್ಕೆ ಕೊಡಗಿನಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ.

ಪರ-ವಿರೋಧಗಳಿಂದಾಗಿ ಜಿಲ್ಲೆಯಲ್ಲಿ ಸಂಘರ್ಷ ಸಂಭವಿಸುವ ಸಾಧ್ಯತೆಗಳಿದ್ದು, ಮತ್ತೆ ನರಕ ಅನುಭವಿಸಬೇಕಾ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳು ಸಭೆ ನಡೆಸಿ  ಟಿಪ್ಪು ಜಯಂತಿ ಆಚರಣೆ ಮಾಡಬಾರದಂತೆ ಆಗ್ರಹಿಸುತ್ತಿವೆ.
ಟಿಪ್ಪು ಜಯಂತಿ ಆಚರಿಸದಂತೆ ಕೋರಿ ಯುಕೊ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ರಿಟ್ ಅರ್ಜಿ ನ್ಯಾಯಾಲಯಕ್ಕೆ ಸಲ್ಲಿಸಿದ್ದು ರಿಟ್ ಬದಲು ರಾಜ್ಯ ಉಚ್ಚ ನ್ಯಾಯಾಲಯ ಪೀಠದ ಮುಂದೆ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವಂತೆ ಜಸ್ಟಿಸ್ ಎ.ಎಸ್. ಬೋಪಣ್ಣ ಸೂಚಿಸಿದ್ದಾರೆ. ಅಲ್ಲದೆ ಅರ್ಜಿ ವಿಚಾರಣೆಯನ್ನು ನವೆಂಬರ್ ಮೊದಲ ವಾರಕ್ಕಿರಿಸಿದ್ದಾರೆ.

ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಟಿಪ್ಪು ಜಯಂತಿಯ ವಿರುದ್ಧ ತಾತ್ವಿಕ ಅಂತ್ಯ ಕಾಣುವವರೆಗೆ  ಸುಪ್ರೀಂ ಕೋರ್ಟಿಗೆ ತೆರಳಲೂ ಸಿದ್ಧರಿರುವದಾಗಿ ತಿಳಿಸಿದ್ದಾರೆ.  ಮಂಜು ಪರ ಅವರ ವಕೀಲರಾದ ಪವನಚಂದ್ರ ಶೆಟ್ಟಿ ಅವರು ಟಿಪ್ಪು ಹತ್ಯಾಕಾಂಡಕ್ಕೆ ಸಂಬಂಧಿಸಿದ ಎಲ್ಲಾ ಐತಿಹಾಸಿಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಕನ್ನಡದಲ್ಲಿ ನೀಡಲಾಗಿತ್ತು. ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮುಂದೆ ಸಲ್ಲಿಸಬೇಕಾಗಿದೆ. ಮುಖ್ಯ ನ್ಯಾಯಾಧೀಶರು ಇದನ್ನು ಓದಬೇಕಾದರೆ ಈಗ ಕನ್ನಡದಲ್ಲಿರುವ ರಿಟ್ ಅರ್ಜಿಯಲ್ಲಿ ನೀಡಲಾದ  ಎಲ್ಲಾ ದಾಖಲೆಗಳನ್ನು ಇಂಗ್ಲೀಷ್ ಗೆ ತರ್ಜುಮೆ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ಸಮಯಗಳಿಂದ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು, ಹಿಂದೂಪರ ಹಾಗೂ ಕೊಡವ ಸಮಾಜ ಸೇರಿದಂತೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆಗಳನ್ನು ನೀಡುತ್ತಿವೆ. ಟಿಪ್ಪು ಜಯಂತಿಗೆ ಇನ್ನೂ ಕೆಲವೇ ದಿನಗಳು ಬಾಕಿಯಿದ್ದು ಮತ್ತೆ ಕಳೆದ ವರ್ಷದ ಕರಾಳದಿನ ಎದುರಾಗುತ್ತಾ ಎಂಬ ಭಯ ಜನತೆಯನ್ನು ಕಾಡುತ್ತಿದೆ.

ಶಾಂತಿಯುತ ಕೊಡಗಿನಲ್ಲಿ ಮತ್ತೆ ಟಿಪ್ಪು ಜಯಂತಿ ವಿಚಾರದಲ್ಲಿ ಗಲಭೆಗಳಾಗುವ ಲಕ್ಷಣಗಳಿವೆ. ಹೀಗಾಗಿ ಜನ ಭಯಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಾರಿ ಜಿಲ್ಲೆಯ ಶೇ.80ರಷ್ಟು ಜನ ವಿರೋಧಪಡಿಸುತ್ತಿದ್ದು, ನಮ್ಮನ್ನು ನೆಮ್ಮದಿಯಾಗಿ ಬದುಕಲು ಅವಕಾಶ ನೀಡಿ ಎಂದು ಗೋಗರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ತೀವ್ರ ಒತ್ತಡಕ್ಕೆ ಮಣಿದು ವಾಪಾಸ್ಸು ಪಡೆದರೆ ಒಂದು ವರ್ಗದ ಆಕ್ರೋಶಕ್ಕೆ ತುತ್ತಾಗಬೇಕಾಗಬೇಕೆಂಬ ಭಯ ಸರ್ಕಾರದ್ದಾಗಿದೆ. ಆದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಜಿಲ್ಲಾಡಳಿತ ಜಯಂತಿ ಆಚರಿಸುವುದು ಅನಿವಾರ್ಯವಾಗಿದೆ.

ಕಳೆದ ವರ್ಷದ ಕಹಿ ಘಟನೆ ಇನ್ನೂ ಹಸಿರಾಗಿರುವುದರಿಂದ ಬಹುಶಃ ಈ ಬಾರಿ ಎಲ್ಲ ರೀತಿಯ ಕಟ್ಟುನಿಟ್ಟಿನ ಮತ್ತು ಭಾರೀ ಬಿಗಿಪೊಲೀಸ್ ಬಂದೋಬಸ್ತ್ ನಲ್ಲಿ ಟಿಪ್ಪು ಜಯಂತಿ ನಡೆದರೂ ನಡೆಯಬಹುದು. ಈ ನಡುವೆ ಎಲ್ಲ ಹೋಬಳಿ, ತಾಲೂಕು ಕೇಂದ್ರಗಳಲ್ಲಿ ಸಭೆ ನಡೆಸುತ್ತಿರುವ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲವನ್ನು ಅವಲೋಕಿಸಿದರೆ ಮತ್ತೆ ಕೊಡಗಿನಲ್ಲಿ ಶಾಂತಿಭಂಗವುಂಟಾಗುವ ಸಾಧ್ಯತೆ ಹೆಚ್ಚಾಗಿದೆ.

See also  ಗುಂಡಿನ ದಾಳಿ ಪ್ರಕರಣ: ಬಾರ್ ಲೈಸೆನ್ಸ್ ರದ್ದುಗೊಳಿಸಲು ಆಗ್ರಹ

ಈ ನಡುವೆ ದಕ್ಷಿಣಕೊಡಗಿನ ಟಿ.ಶೆಟ್ಟಿಗೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕೊಡವ ಮಾಪಿಳ್ಳೆ ಸಮುದಾಯದ ಪ್ರಮುಖರಾದ ಇಬ್ರಾಹಿಂ ಇಸ್ಲಾಂ ಧರ್ಮದಲ್ಲಿ ಯಾವುದೇ ಮೂರ್ತಿ ಪೂಜೆ, ವ್ಯಕ್ತಿ ಪೂಜೆ, ಜಯಂತಿ ಆಚರಿಸುವ ಪದ್ಧತಿ ಇಲ್ಲ. ಕೊಡವ ಮಾಪಿಳ್ಳೆ ಸಮುದಾಯವಾದ ನಾವು ಹಿಂದೆ ಕೊಡವರಾಗಿದ್ದೆವು. ಟಿಪ್ಪು ಸುಲ್ತಾನ್ ನಮ್ಮನ್ನು ಬಲಾತ್ಕಾರವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದಾನೆ. ಈ ಬಗ್ಗೆ ನಮಗೆ ಹಾಗೂ ನಮ್ಮ ಹಿರಿಯರಲ್ಲಿ ನೋವು ಹೆಪ್ಪುಗಟ್ಟಿದೆ. ಟಿಪ್ಪು ಜಯಂತಿಯನ್ನು ಕೊಡಗಿನ ಮೂಲ ನಿವಾಸಿಗಳಾದ ಕೊಡವ ಮಾಪಿಳ್ಳೆ ಸಮುದಾಯ ವಿರೋಧಿಸುತ್ತದೆ. ನಾವುಗಳು ಅಣ್ಣ-ತಮ್ಮಂದಿರ ರೀತಿಯಲ್ಲಿ ಜಿಲ್ಲೆಯಲ್ಲಿ ಬಾಳುತ್ತಿದ್ದೇವೆ. ಯಾವುದೇ ಸಂದರ್ಭದಲ್ಲೂ ಕೊಡವರು ನಮ್ಮನ್ನು ಕೀಳಾಗಿ ಕಂಡಿಲ್ಲ. ಈ ಟಿಪ್ಪು ಜಯಂತಿ ಆಚರಣೆ ಬಂದ ನಂತರ ಜಿಲ್ಲೆಯಲ್ಲಿ ಪರಸ್ಪರ ದ್ವೇಷ ಭಾವನೆ ಉಂಟಾಗಿದೆ. ಕಳೆದ ಬಾರಿಯ ಆಚರಣೆಯಲ್ಲಿ ಅಮಾಯಕರು ಬಲಿಯಾಗಿದ್ದಾರೆ. ಹೊರಗಿನಿಂದ ಬಂದ ಕೆಲವರು ಟಿಪ್ಪು ಜಯಂತಿಗೆ ಬೆಂಬಲ ನೀಡುತ್ತಿದ್ದಾರೆಯೇ ಹೊರತು ಕೊಡವ ಮಾಪಿಳ್ಳೆ ಸಮುದಾಯ ಎಂದಿಗೂ ಟಿಪ್ಪು ಜಂಯತಿಗೆ ಬೆಂಬಲ ಸೂಚಿಸುವದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.  

ರಾಜ್ಯದಲ್ಲಿ ಈ ಬಾರಿಯೂ ಟಿಪ್ಪು ಜಯಂತಿ ಆಚರಣೆಗೆ ಮುಂದಾದರೆ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವದು ಖಚಿತವೆಂದು ಬಿಜೆಪಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ ಹೇಳಿದ್ದಾರೆ. ಇದೆಲ್ಲದರ ನಡುವೆ ಜಯಂತಿಗಳ ಆಚರಣೆಯಿಂದ ದೇಶದಲ್ಲಿ ಆದರ್ಶ ಮತ್ತು ಸಾಮರಸ್ಯಕ್ಕೆ ಬದಲಾಗಿ ಶಾಂತಿ ಭಂಗವಾಗುತ್ತಿರುವುದರಿಂದ ಜಯಂತಿ ಆಚರಣೆಗಳನ್ನು ರದ್ದುಗೊಳಿಸಲು ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೀಪಲ್ಸ್ ಮೂವ್ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ನ ಅಧ್ಯಕ್ಷ ಹರೀಶ್ ಜಿ. ಆಚಾರ್ಯ ಒತ್ತಾಯಿಸಿದ್ದಾರೆ.

ಒಟ್ಟಾರೆ ಕೊಡಗು ಜಿಲ್ಲೆಯಾದ್ಯಂತ ದಿನಕಳೆದಂತೆ ಟಿಪ್ಪುಜಯಂತಿಗೆ ವಿರೋಧಗಳು ಹೆಚ್ಚಾಗುತ್ತಲೇ ಸಾಗುತ್ತಿದ್ದು, ಸರ್ಕಾರ ಈ ವಿಚಾರದಲ್ಲಿ ಯಾವ ರೀತಿಯ ನಿಲುವನ್ನು ತೆಗೆದುಕೊಳ್ಳುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು