News Kannada
Tuesday, October 04 2022

ಕರ್ನಾಟಕ

ಮನೆಗೆ ನುಗ್ಗಿ ಹಲ್ಲೆ, ದರೋಡೆ: ಮೂವರ ಬಂಧನ - 1 min read

Photo Credit :

ಮನೆಗೆ ನುಗ್ಗಿ ಹಲ್ಲೆ, ದರೋಡೆ: ಮೂವರ ಬಂಧನ

ಕುಶಾಲನಗರ: ಬೆಳಗ್ಗಿನ ವೇಳೆ ಮನೆಯೊಂದಕ್ಕೆ ನುಗ್ಗಿದ ದರೋಡೆಕೋರರ ತಂಡ ಮನೆಯೊಳಗಿದ್ದ ಸುಮಾರು 20 ಲಕ್ಷ ರು. ಮೌಲ್ಯದ ನಗದು ಆಭರಣ ದೋಚಿ, ಮೂವರ ಮೇಲೆ ಹಲ್ಲೆ ಮಾಡಿರುವ ಘಟನೆ ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದಲ್ಲಿ ಸಂಭವಿಸಿದ್ದು, ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಹೊಸಪಟ್ಟಣ ಗ್ರಾಮದಲ್ಲಿ ಪಟೇಲ್ ಶಿವಕುಮಾರ್ ಎಂಬುವವರು ಒಬ್ಬಂಟಿಯಾಗಿ ಮನೆಯಲ್ಲಿ ವಾಸವಿರುವುದನ್ನರಿತ ದರೋಡೆಕೋರರ ತಂಡ ಗುರುವಾರ ಬೆಳಗ್ಗೆ ಸುಮಾರು 7.15ರ ಸಮಯದಲ್ಲಿ ದರೋಡೆ ನಡೆದಿದೆ. ಶಿವಕುಮಾರ್ರವರ ಪುತ್ರಿ ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಪತ್ನಿ ಮಗಳೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದರು ಎನ್ನಲಾಗಿದೆ.

ಶಿವಕುಮಾರ್ ರವರು ಇಂದು ಬೆಳಗ್ಗೆ ಬೆಂಗಳೂರಿಗೆ ಹೋಗುವ ಸಿದ್ಧತೆಯಲ್ಲಿದು, ಸ್ನಾನ ಮುಗಿಸಿ ಪೂಜಾ ವಿಧಿಗಳನ್ನು ಮಾಡಲು ಸಿದ್ದವಾಗುತ್ತಿದ್ದಂತೆ ತಮ್ಮ ಸೋದರ ಸಂಬಂಧಿ ವಿಶ್ವನಾಥ್ ಮನೆಗೆ ಬಂದಿದ್ದಾರೆ. ಪೂಜೆಗೆ ಹೂಗಳನ್ನು ಕೊಯ್ದು ತರಲು ಅವರನ್ನು ಕಳುಹಿಸಿ ಮುಖ್ಯದ್ವಾರದಿಂದ ಒಳಬರುತ್ತಿದ್ದಂತೆ ಅವರದ್ದೇ ಕಾಫಿ ತೋಟದ ಒಳಗಡೆಯಿಂದ ಸುಮಾರು 8 ಜನರ ತಂಡ ಮುಂಭಾಗಿಲಿನಿಂದಲೇ ಮಾರಾಕಾಸ್ತ್ರಗಳೊಂದಿಗೆ ಮನೆಯೊಳಗೆ ಒಮ್ಮೆಲೆ ನುಗ್ಗಿದ್ದಾರೆ. ಮೊದಲಿಗೆ ವಿಶ್ವನಾಥ್ ರವರ ಕೈಕಾಲುಗಳನ್ನು ಕಟ್ಟಿ ಮಲಗಿಸಿದ್ದಾರೆ. ಅವರ ಬಾಯಿಗೆ ಪ್ಲಾಸ್ಟರ್ ನಿಂದ ಸುತ್ತಿದ್ದಾರೆ. ಅವರು ಕೊಸರಿಕೊಳ್ಳುತ್ತಿದ್ದಾಗ ಹಿಂಭಾಗಕ್ಕೆ ಚಾಕುವಿನಿಂದ ತಿವಿದು, ಪ್ರಾಣಭಯವನ್ನು ಒಡ್ಡಿದ್ದಾರೆ. ನಂತರ ಆಗಂತುಕರು ಶಿವಕುಮಾರ್ ಅವರನ್ನು ಹಿಡಿಯಲು ಮುಂದಾಗಿದ್ದಾರೆ. ದಿಗ್ಬ್ರಾಂತರಾದ ಅವರು ಹಿಂಭಾಗಿಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಕೋಣೆಯಲ್ಲೆ ಅವರ ಕೈಗಳನ್ನು ಹಿಂದಕ್ಕೆ ಕಟ್ಟಿ ಅವರ ಬಾಯಿಗೆ ಕೂಡಾ ಪ್ಲಾಸ್ಟರ್ ಸುತ್ತಿದ್ದಾರೆ.

ಹಣ ಎಲ್ಲಿದೆ ಎಂದು ಹಿಂದಿಯಲ್ಲಿ ಪ್ರಶ್ನಿಸಿದ ಮುಸುಕುದಾರಿ ದರೋಡೆಕೋರರು ಮಾರಕಾಸ್ತ್ರಗಳನ್ನು ತೋರಿಸಿ ಶಿವಕುಮಾರ್ ಅವರ ಕುತ್ತಿಗೆಯನ್ನು ಗಟ್ಟಿಯಾಗಿ ಅಮುಕಿದ್ದಾರೆ. ಇದರಿಂದ ವಿಚಲಿತರಾದ ಶಿವಕುಮಾರ್ ಅವರು ತೋರಿಸಿದ ಮರದ ಕಪಾಟು ಮತ್ತು ಗಾಡ್ರೇಜ್ ಬೀರುಗಳನ್ನು ತೆರೆದು ಜಾಲಾಡಿ ಗಾಡ್ರೇಜ್ ಬೀರುವಿನಲ್ಲಿದ್ದ ಹಣ ಮತ್ತು ವಜ್ರಭರಣಗಳನ್ನು ತೆಗೆದುಕೊಂಡಿದ್ದಾರೆ. ಅದೇ ಕಪಾಟಿನಲ್ಲಿರಿಸಿದ್ದ ರಿವಲ್ವಾರ್ ಅನ್ನು ತೆಗೆದುಕೊಂಡಿದ್ದಾರೆ. ಆದರೆ, ರಿವಾಲ್ವಾರ್ ನಲ್ಲಿ ರಾತ್ರಿಯಷ್ಟೇ ಲೋಡ್ ಮಾಡಿ ಇರಿಸಿದ್ದ ಬುಲೆಟ್ಅನ್ನು ಬೆಳಗ್ಗೆ ತೆಗೆದಿಟ್ಟಿದ್ದರು. ಆದರೂ ಅದೇ ಗನ್ ನಿಂದ ಮತ್ತೊಮ್ಮೆ ಹೆದರಿಸಿ ಕಬ್ಬಿಣದ ಹಳೆ ಕಾಲದ ಗಾಡ್ರೇಜ್ ಕೀಲಿ ಕೈಯನ್ನು ಕೇಳಿ ಹಣ ಹಾಗೂ ಆಭರಣಗಳನ್ನು ದೋಚಿದ್ದಾರೆ.

ಮುಂಬಾಗಿಲಿನಲ್ಲಿ ಒಬ್ಬ ದರೋಡೆ ಕೋರ ಮಾರಕಾಸ್ತ್ರಗಳನ್ನು ಹಿಡಿದಿದ್ದು, ಮುಂಭಾಗಿಲಿಗೆ ಬೀಗ ಹಾಕಿಕೊಂಡು ಮನೆಯನ್ನು ಬಳಸಿ ಹಿಂಭಾಗಕ್ಕೆ ಬಂದು ಅವರೊಂದಿಗೆ ಸೇರಿಕೊಂಡಿದ್ದಾನೆ. ಅದೇ ಸಂದರ್ಭದಲ್ಲಿ ಶಿವಕುಮಾರ್ ಅವರ ಗೆಳೆಯ ಹಾಗೂ ನೆರೆಮನೆಯ ಈಶ್ವರ್ ರವರು ಬೆಂಗಳೂರಿಗೆ ಹೋಗುವ ಉದ್ದೇಶದಿಂದ ಶಿವಕುಮಾರ್ ಮನೆಗೆ ಬಂದಿದ್ದಾರೆ. ಮನೆಯ ಮುಂಭಾಗಿಲು ಬೀಗ ಹಾಕಿರುವುದನ್ನು ಗಮನಸಿ ಅವರು ಹಿಂಬಾಗಿಲಿನಿಂದ ಬರಲು ಮನೆ ಸುತ್ತಿ ಬರುತ್ತಿದ್ದಾಗ ಅಲ್ಲಿಯೇ ಇದ್ದ ಇಬ್ಬರು ಆಗಂತುಕರು ಮುಖಕ್ಕೆ ಗುದ್ದಿದ್ದಾರೆ. ಅವರು ಗಾಬರಿಗೊಂಡು ಮೇಲೇಳಲು ಪ್ರಯತ್ನಪಟ್ಟಾಗ ಮಾರಕಾಸ್ತ್ರಗಳನ್ನು ತೋರಿಸಿ ಹಾಗೇ ಕೂತಿರಲು ಹೇಳಿದ್ದಾರೆ. ನಂತರ ಮನೆಯೊಳಗಡೆಯಿಂದ ಹಣ ಮತ್ತು ಒಡವೆಗಳನ್ನು ದೋಚಿ ಓಡಿ ಹೋದ ಮೇಲೆ ಸಾವರಿಸಿಕೊಂಡ ಈಶ್ವರ್ ಮನೆಯ ಮುಂಭಾಗಕ್ಕೆ ಹೋಗಿ ಅಕ್ಕಪಕ್ಕದ ನಿವಾಸಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

See also  ಮಳೆಯಲ್ಲೇ ಜರುಗಿದ ಹಿಂಡಿಮಾರಮ್ಮನ ಕೊಂಡೋತ್ಸವ

ಅವರೆಲ್ಲ ಅಲ್ಲಿಗೆ ಬರುವ ವೇಳೆಗೆ ಬಹಳಷ್ಟು ಸಮಯವಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹೊಸಪಟ್ಟಣ, ನಂಜರಾಯಪಟ್ಟಣ, ರಂಗಸಮುದ್ರ ವ್ಯಾಪ್ತಿಯ ಸಾರ್ವಜನಿಕ ಯುವಕರ ನೆರವಿನೊಂದಿಗೆ ಸುತ್ತಮುತ್ತಲ ತೋಟಗಳಲ್ಲೆಲ್ಲ ದರೋಡೆಕೋರರಿಗಾಗಿ ಹುಡುಕಾಟ ನಡೆಸಿದ್ದಾರೆ. ಆ ಸಂದರ್ಭದಲ್ಲಿ ನಂಜರಾಯಪಟ್ಟಣ, ದುಬಾರೆ ತಿರುವಿನಲ್ಲಿ ಅನುಮಾನಾಸ್ಪದವಾಗಿ ನಡೆದುಹೋಗುತ್ತಿದ್ದ ಮೈಮೆಲೆಲ್ಲ ಗಿಡಗಂಟಿಗಳಿಂದ ತರಚಿದ ಗೆರೆಗಳನ್ನು ಮತ್ತು ಕೆಸರಲ್ಲಿ ಬಿದ್ದು ಎದ್ದ ರೀತಿಯಲ್ಲಿದ್ದ ಶೂಗಳನ್ನು ಹೊಂದಿದ್ದ ವ್ಯಕ್ತಿಯೊರ್ವನನ್ನು ಗಮನಿಸಿದ ಯುವಕರು ಪೊಲೀಸರು ವಶಕ್ಕೆ ಒಪ್ಪಿಸಿದ್ದಾರೆ. ಆ ವ್ಯಕ್ತಿಯ ಫೋಟೋವನ್ನು ಶಿವಕುಮಾರ್ ಅವರ ಕಾಂಪೈಂಡಿನ ಒಳಗಿರುವ ಲೈನ್ ಮನೆಗಳಲ್ಲಿರುವ ಅಸ್ಸಾಂ ಕೂಲಿ ಕಾರ್ಮಿಕನಿಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಹೇಶ್ ತೋರಿಸಲಾಗಿ ಮನೆಯ ಮುಂಭಾಗದಲ್ಲಿ ಮಾರಕಾಸ್ತ್ರದಿಂದ ದಸ್ತು ಕಾಯುತ್ತಿದ್ದ ವ್ಯಕ್ತಿ ಇವನೇ ಎಂದು ಗುರುತಿಸಿದ್ದಾನೆ. ನನಗೂ ಅವನು ಹೆದರಿಸಿದಾಗ ಜೀವಭಯದಿಂದ ತೋಟದೊಳಗೆ ಹೋಗಿ ತೋಟದ ಒಳಗೆ ಇದ್ದ ಕಾರ್ಮಿಕರನ್ನು ನಾನು ಕರೆದುಕೊಂಡು ಬರುವಷ್ಟರಲ್ಲಿ ಅವರು ಪಲಾಯನ ಮಾಡಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಈ ಸಂದರ್ಭದಲ್ಲಿ ಮಡಿಕೇರಿಯಿಂದ ಬಂದ ಶ್ವಾನಪತ್ತೆದಳದ ನಾಯಿ ಮನೆಯ ಮುಂಬಾಗಿಲ ಸ್ಥಳದಿಂದ ಮನೆಯನ್ನು ಸುತ್ತುವರೆದು ಕಾಫಿ ತೋಟದ ಒಳಗೆ ನುಗ್ಗಿ ಚಿಕ್ಲಿಹೊಳೆ ಕಡೆ ನುಗ್ಗಿಹೋಯಿತು. ಮುಂದೆ ಅದು ಮ್ಯಾಗಡೂರ್ ಎಸ್ಟೇಟ್ ಒಳಗೆ ಸುತ್ತಾಡುತ್ತಿದ್ದಂತೆಯೇ ಆ ಪ್ರದೇಶದ ರಸ್ತೆಯಲ್ಲಿ ಹಾದುಹೋಗುತ್ತಿದ್ದ ಜನ ಈ ದರೋಡೆಕೋರರಲ್ಲಿ ಇಬ್ಬರನ್ನು ಅನುಮಾನದ ಮೇಲೆ ಪೊಲೀಸರಿಗೆ ತಿಳಿಸಿ ಅವರನ್ನು ವಶಕ್ಕೆ ಪಡೆದುಕೊಳ್ಳಲು ಸಹಕರಿಸಿದ್ದಾರೆ.

ಶ್ವಾನಪತ್ತೆದಳ, ನಕ್ಸಲ್ ನಿಗ್ರಹದಳ, ಹಾಗೂ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿಗಳು ಹಾಗು ಸಾರ್ವಜನಿಕರು ಇನ್ನೂ ಹೊಸಪಟ್ಟಣದ ಸುತ್ತಮುತ್ತ ಕಾಫಿ ತೋಟದ ಸುತ್ತಲು ಉಳಿದಿರುವ ದರೋಡೆಕೋರರಿಗಾಗಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್, ಡಿವೈಎಸ್ಪಿ ಸಂಪತ್ಕುಮಾರ್, ವೃತ್ತ ನಿರೀಕ್ಷಕ ಕ್ಯಾತೆಗೌಡ, ಸಬ್ಇನ್ಸ್ಪೆಕ್ಟರ್ಗಳಾದ ಮಹೇಶ್, ಅನೂಪ್ಮಾದಪ್ಪ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಅನುಮಾನ ಹುಟ್ಟಿಸಿದ ಸುಳಿವುಗಳು:
ದರೋಡೆಕೋರರು ಬಿಟ್ಟುಹೋದ ಕೆಲವು ಸುಳಿವುಗಳಾದ ಮನೆಯ ಸುತ್ತಮುತ್ತ ಮೂರ್ನಾಲ್ಕು ಕೈಗಳಿಗೆ ಬಳಸಿದ್ದ ಗ್ಲೌಜ್ ಗಳು ಮನೆಯಿಂದ ಸ್ಪಲ್ಪ ದೂರದಲ್ಲಿ ಹಾದುಹೋದ ಹೊರರಾಜ್ಯದ ಇನೋವ ಕಾರು(ಎಂಎಚ್-06) ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ದರೋಡೆಕೋರರು ಕೇವಲ ಶಿವಕುಮಾರ್ ಅವರನ್ನು ಮಾತ್ರ ಹಣಕ್ಕಾಗಿ ಪೀಡಿಸಿ ಹಲ್ಲೆ ಮಾಡಲು ಮುಂದಾಗಿ ವಿಶ್ವನಾಥ್ ಅವರನ್ನು ಏನೂ ಕೇಳಲಿಲ್ಲ. ಆದ್ದರಿಂದ ಈ ದರೋಡೆಕೋರರ ಗುಂಪಿನಲ್ಲಿ ಮುಸುಕು ಹಾಕಿದ ವ್ಯಕ್ತಿಗಳು ಸ್ಥಳೀಯರು ಇರಬಹುದೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು